ಸಿದ್ದರಾಮಯ್ಯ ಸಂಪುಟಕ್ಕೆ ಮೇಜರ್ ಸರ್ಜರಿಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿರುವ ಸಿದ್ದರಾಮಯ್ಯ, ಡಿಕೆಶಿಗೆ ಇಂದೇ ಸ್ಪಷ್ಟ ಸೂಚನೆ ಸಿಗುವ ಸಾಧ್ಯತೆಗಳಿವೆ.
ಈ ಬಾರಿ ಸಂಪುಟದ 8 ರಿಂದ 10 ಮಂದಿಯನ್ನು ಕೈಬಿಡುವ ಯೋಚನೆ ಹೈಕಮಾಂಡ್ ಗಿದೆ. ಅಸಮರ್ಥರು, ಹೊಣೆಗಾರಿಕೆ ನಿಭಾಯಿಸದವರನ್ನು ಟಾರ್ಗೆಟ್ ಮಾಡಿ ಸರ್ಜರಿಗೆ ತೀರ್ಮಾನಿಸಲಾಗಿದೆ.
ಇದರೊಟ್ಟಿಗೆ ಕೆಲ ಸಚಿವರ ವಿಶೇಷಾಧಿಕಾರಿಗಳ ಭ್ರಷ್ಟಾಚಾರವೂ ತಾರಕಕ್ಕೇರಿದ್ದು, ಈ ಬಗ್ಗೆಯೂ ಹೈಕಮಾಂಡ್ ಕೈಗೆ ವರದಿ ಸಿಕ್ಕಿದೆ. ಇದೆಲ್ಲವನ್ನು ಆಧರಿಸಿಯೇ ಸಂಪುಟದಲ್ಲಿ ಮಹತ್ವದ ಬದಲಾವಣೆಗೆ ಕಟ್ಟಪ್ಪಣೆ ಮಾಡುವ ಸಾಧ್ಯತೆಗಳಿವೆ. ಹೀಗಾದಲ್ಲಿ ಹಾಲಿ ಸಂಪುಟದ 8ರಿಂದ 10 ಮಂದಿಯನ್ನು ಮನೆಗೆ ಕಳುಹಿಸುವುದು ಪಕ್ಕಾ ಆಗುತ್ತಿದೆ. ಈ ಪೈಕಿ 4 ರಿಂದ 5 ಹಿರಿಯ ಸಚಿವರಿಗೂ ಕೊಕ್ ನೀಡೋದು ಬಹುತೇಕ ಖಚಿತವಾಗುತ್ತಿದೆ. ಇದರೊಟ್ಟಿಗೆ, ಗೃಹ ಇಲಾಖೆಯನ್ನು ಪರಮೇಶ್ವರ್ ಅವರಿಂದ ಪಡೆದು ಮತ್ತಷ್ಟು ಶಕ್ತ ನಾಯಕನಿಗೆ ಪಟ್ಟ ಕಟ್ಟೋ ಬಗ್ಗೆಯೂ ಚಿಂತನೆ ನಡೆದಿದೆ. ಈ ಎಲ್ಲವಕ್ಕೂ ಇಂದು ಸಂಜೆ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಬಹುದಾಗಿದೆ.
ಸಿದ್ದರಾಮಯ್ಯ ಸಂಪುಟದಿಂದ ಕೆಲ ಹಿರಿಯರನ್ನೇ ಕಿಕ್ ಔಟ್ ಮಾಡೋದಕ್ಕೆ ಮುಹೂರ್ತ ನಿಗದಿಯಾಗ್ತಿದೆ. ಈಗಾಗಲೇ ಈ ಬಗ್ಗೆ ಪಕ್ಷದ ದೆಹಲಿ ಮುಖಂಡ ರಾಹುಲ್ ಗಾಂಧಿ ಜೊತೆ ಸಿಎಂ, ಡಿಸಿಎಂ ಚರ್ಚಿಸಿದ್ದಾರೆ. ಮೂವರಿಂದ ಐದು ಮಂದಿ ಹಿರಿಯರನ್ನು ಕೈಬಿಟ್ಟು ಯುವ ಮುಖಂಡರಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯ ಮುಖಂಡರಾಗಿರುವ ಕೆ ಹೆಚ್ ಮುನಿಯಪ್ಪರನ್ನು ಸಚಿವಗಿರಿಯಿಂದ ಕೆಳಗಿಳಿಸೋದು ಪಕ್ಕಾ ಆಗಿದೆ.
ಇವರೊಟ್ಟಿಗೆ, ಗೃಹ ಸಚಿವರಾಗಿರೋ ಡಾ ಜಿ ಪರಮೇಶ್ವರ್, ಕೆ ವೆಂಕಟೇಶ್ ರನ್ನ ಮಂತ್ರಿಗಿರಿಯಿಂದ ವಿಮುಕ್ತಿಗೊಳಿಸೋ ಸುಳಿವು ಸಿಗ್ತಿದೆ. ಇವರಿಂದ ತೆರವಾದ ಸ್ಥಾನಗಳಿಗೆ ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಮತ್ತು ವಾಲ್ಮೀಕಿ ನಿಗಮ ಹಗರಣದಲ್ಲಿ ಸ್ಥಾನ ಕಳೆದುಕೊಂಡಿದ್ದ ನಾಗೇಂದ್ರ ಮರಳಿ ಸಂಪುಟ ಸೇರ್ಪಡೆಯಾಗೋದು ಬಹುತೇಕ ಖಚಿತವಾಗಿದೆ.
ಸಂಪುಟದೊಟ್ಟಿಗೆ ಕೆಪಿಸಿಸಿಗೂ ಮೆಗಾ ಅಪರೇಷನ್ ಫಿಕ್ಸ್ ಆಗಿದೆ. ಆರ್ ಸಿಬಿ ಸಂಭ್ರಮೋತ್ಸವ ವಿಚಾರದಲ್ಲಿ ಎಡವಿದ ಸಿಎಂ ಹಾಗೂ ಡಿಸಿಎಂ ಇಬ್ರಿಗೂ ಬಿಸಿ ಮುಟ್ಟಿಸೋ ತಯಾರಿಯನ್ನು ಹೈಕಮಾಂಡ್ ಮಾಡ್ತಿದೆ. ಈ ನಿಟ್ಟಿನಲ್ಲೇ ಸಂಪುಟದಿಂದ ಸಿದ್ದು-ಡಿಕೆ ಬಣದ ಕೆಲ ಸಚಿವರಿಗೆ ಕೊಕ್ ನೀಡಲು ನಿರ್ಧರಿಸಲಾಗಿದೆ. ಇದರೊಟ್ಟಿಗೆ ಕೆಪಿಸಿಸಿಯಲ್ಲೂ ದೊಡ್ಡ ಬದಲಾವಣೆಗೆ ಅಂತಿಮ ತಯಾರಿ ನಡೆದಿದೆ. ಅದ್ರಲ್ಲೂ ಈ ಬಾರಿ ಪಕ್ಷದ ಅಧ್ಯಕ್ಷ ಗಿರಿ ಅಲಂಕರಿಸಿರುವ ಡಿ ಕೆ ಶಿವಕುಮಾರ್ ಗೆ ಬಿಗ್ ಶಾಕ್ ಕಾದಂತಿದೆ. ಅಧ್ಯಕ್ಷಗಿರಿಯಿಂದ ಡಿಕೆಶಿ ಅವರನ್ನು ಕೆಳಗಿಳಿಸಿ ಹೊಸಬರಿಗೆ ಅವಕಾಶ ಮಾಡಿಕೊಡಲು ಪೂರ್ವ ತಯಾರಿ ನಡೆದಿದೆ ಎನ್ನಲಾಗ್ತಿದೆ.
ಈ ಮೂಲಕ ಕೆಪಿಸಿಸಿ ಪದಾಧಿಕಾರಿಗಳನ್ನೂ ಬದಲಿಸಿ ಸಂಪೂರ್ಣ ಹೊಸ ರೂಪ ನೀಡುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲಾ ಸಿದ್ದರಾಮಯ್ಯರ ಸಿಎಂ ಕಚೇರಿಯ ಅಧಿಕಾರಿಗಳನ್ನೂ ಬದಲಿಸುವಂತೆ ರಾಹುಲ್ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಮೊನ್ನೆಯಷ್ಟೇ ತಮ್ಮ ಆಪ್ತ ಗೋವಿಂದ ರಾಜುರನ್ನ ವಜಾ ಮಾಡಿದ್ದ ಸಿಎಂ ಇದೀಗ ತಮ್ಮ ಸುತ್ತಲಿರೋ ಅಧಿಕಾರಿಗಳನ್ನು ಬದಲಿಸುವ ಕಾಲವು ಸನ್ನಿಹಿತವಾಗಿದೆ ಎನ್ನಲಾಗ್ತಿದೆ. ಇತ್ತ ಕೆಪಿಸಿಸಿ ಅಧ್ಯಕ್ಷಗಿರಿ ಬದಲಿಸೋದಾದ್ರೆ, ನನಗೊಂದು ಅವಕಾಶ ನೀಡಿ ಅಂತಾ ಸತೀಶ್ ಜಾರಕಿಹೊಳಿ ಮನವಿ ಮಾಡ್ತಿದ್ದಾರೆ. ಈಗಾಗಲೇ ಸಿಎಂ-ಡಿಸಿಎಂ ಜೊತೆ ದೆಹಲಿಯಲ್ಲೇ ಠಿಕಾಣಿ ಹೂಡಿರುವ ಸತೀಶ್ ಕೆಪಿಸಿಸಿ ಕುರ್ಚಿ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ.



















