ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ಎದುರಿಸುವ ಅಮೆರಿಕದ ಸಾಮರ್ಥ್ಯಕ್ಕೆ ಭಾರೀ ಪೆಟ್ಟು ಬಿದ್ದಿದೆ. ಜೋರ್ಡಾನ್‌ನಲ್ಲಿರುವ ಅಮೆರಿಕದ ಅತ್ಯಾಧುನಿಕ ಹಾಗೂ 300 ದಶಲಕ್ಷ ಡಾಲರ್ ಮೌಲ್ಯದ ‘ಥಾಡ್’ (THAAD) ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ರೇಡಾರ್ ಅನ್ನು ಇರಾನ್ ಧ್ವಂಸಗೊಳಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಉಪಗ್ರಹ ಚಿತ್ರಗಳಿಂದ ರೇಡಾರ್ ನಾಶ ಖಚಿತ
ಯುದ್ಧದ ಆರಂಭಿಕ ದಿನಗಳಲ್ಲಿಯೇ ಜೋರ್ಡಾನ್‌ನ ಮುವಾಫಾಕ್ ಸಾಲ್ಟಿ ವಾಯುನೆಲೆಯಲ್ಲಿ ಅಳವಡಿಸಲಾಗಿದ್ದ ಆರ್‌ಟಿಎಕ್ಸ್ ಕಾರ್ಪ್‌ನ ‘ಎಎನ್/ಟಿಪಿವೈ-2’ (AN/TPY-2) ರೇಡಾರ್ ಮತ್ತು ಅದರ ಬೆಂಬಲಿತ ಉಪಕರಣಗಳನ್ನು ಇರಾನ್ ನಾಶಪಡಿಸಿದೆ ಎಂಬುದನ್ನು ವಾಣಿಜ್ಯ ಉಪಗ್ರಹ ಚಿತ್ರಗಳು ದೃಢಪಡಿಸಿವೆ. ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್ (ಎಫ್‌ಡಿಡಿ) ನೀಡಿರುವ ಮಾಹಿತಿಯ ಪ್ರಕಾರ, ಫೆ.28 ಮತ್ತು ಮಾರ್ಚ್ 3ರಂದು ಜೋರ್ಡಾನ್ ಮೇಲೆ ಇರಾನ್ ಎರಡು ಪ್ರಮುಖ ದಾಳಿಗಳನ್ನು ನಡೆಸಿತ್ತು. ಈ ದಾಳಿಯು ಇರಾನ್‌ನ ಅತ್ಯಂತ ಯಶಸ್ವಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಿಸಲಾಗಿದೆ. ಆದರೂ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಬಳಿ ಇತರ ರೇಡಾರ್‌ಗಳಿರುವುದರಿಂದ ವಾಯು ರಕ್ಷಣೆಗೆ ಸಂಪೂರ್ಣ ಅಡ್ಡಿಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪೇಟ್ರಿಯಾಟ್ ವ್ಯವಸ್ಥೆಯ ಮೇಲೆ ಹೆಚ್ಚಿದ ಒತ್ತಡ
ಭೂಮಿಯ ವಾತಾವರಣದ ಅಂಚಿನಲ್ಲಿರುವಾಗಲೇ ಶತ್ರುಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ‘ಥಾಡ್’ (ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್) ಹೊಂದಿತ್ತು. ಅಲ್ಪ-ಶ್ರೇಣಿಯ ಪೇಟ್ರಿಯಾಟ್ ಬ್ಯಾಟರಿಗಳಿಗಿಂತ ಹೆಚ್ಚು ಕಠಿಣ ಬೆದರಿಕೆಗಳನ್ನು ಎದುರಿಸಲು ಇದನ್ನು ವಿನ್ಯಾಸಗೊಳಿಸಲಾಗಿತ್ತು. ಇದೀಗ ಎಎನ್/ಟಿಪಿವೈ-2 ರೇಡಾರ್ ನಾಶವಾಗಿರುವುದರಿಂದ, ಕ್ಷಿಪಣಿಗಳನ್ನು ತಡೆಯುವ ಸಂಪೂರ್ಣ ಜವಾಬ್ದಾರಿಯು ಪೇಟ್ರಿಯಾಟ್ ವ್ಯವಸ್ಥೆಗಳ ಮೇಲೆ ಬಿದ್ದಿದೆ. ಆದರೆ, ಈ ವ್ಯವಸ್ಥೆಗೆ ಅಗತ್ಯವಿರುವ ಪಿಎಸಿ-3 (PAC-3) ಕ್ಷಿಪಣಿಗಳ ಕೊರತೆ ಈಗಾಗಲೇ ಎದುರಾಗಿರುವುದು ಅಮೆರಿಕದ ತಲೆನೋವು ಹೆಚ್ಚಿಸಿದೆ.
ದುಬಾರಿ ರಕ್ಷಾ ಕವಚ
ಅಮೆರಿಕದ ಬಳಿ ಪ್ರಸ್ತುತ ದಕ್ಷಿಣ ಕೊರಿಯಾ ಮತ್ತು ಗುವಾಮ್ ಸೇರಿದಂತೆ ಜಾಗತಿಕವಾಗಿ ಕೇವಲ 8 ಥಾಡ್ ವ್ಯವಸ್ಥೆಗಳಿವೆ. ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ಪ್ರಕಾರ, ಪ್ರತಿಯೊಂದು ಥಾಡ್ ಬ್ಯಾಟರಿಯು ಸುಮಾರು 1 ಬಿಲಿಯನ್ ಡಾಲರ್ ವೆಚ್ಚವನ್ನು ಹೊಂದಿದ್ದು, ಅದರಲ್ಲಿ ರೇಡಾರ್ ಬೆಲೆಯೇ ಸುಮಾರು 300 ಮಿಲಿಯನ್ ಡಾಲರ್ ಆಗಿದೆ. 2012ರ ಗುರಿಯ ಪ್ರಕಾರ ಅಮೆರಿಕದ ಬಳಿ 9 ಥಾಡ್ ವ್ಯವಸ್ಥೆಗಳಿರಬೇಕಿತ್ತು. ಪ್ರಸ್ತುತ ಕೇವಲ ಎಂಟು ಇರುವುದರಿಂದ ಹಾಗೂ ಹೆಚ್ಚುವರಿ ಟಿಪಿವೈ-2 ರೇಡಾರ್‌ಗಳು ಲಭ್ಯವಿಲ್ಲದ ಕಾರಣ, ಈ ನಷ್ಟವು ಅಮೆರಿಕಕ್ಕೆ ಭಾರಿ ಹಿನ್ನಡೆಯನ್ನುಂಟುಮಾಡಿದೆ. ಒಂದು ಥಾಡ್ ಬ್ಯಾಟರಿಯು 90 ಸೈನಿಕರು, ಆರು ಟ್ರಕ್-ಮೌಂಟೆಡ್ ಲಾಂಚರ್‌ಗಳು ಮತ್ತು 48 ಇಂಟರ್‌ಸೆಪ್ಟರ್‌ಗಳನ್ನು ಒಳಗೊಂಡಿರುತ್ತದೆ. ಲಾಕ್‌ಹೀಡ್ ಮಾರ್ಟಿನ್ ಕಾರ್ಪ್ ನಿರ್ಮಿಸುವ ಪ್ರತಿಯೊಂದು ಇಂಟರ್‌ಸೆಪ್ಟರ್ ಕ್ಷಿಪಣಿಗೆ ಸುಮಾರು 13 ಮಿಲಿಯನ್ ಡಾಲರ್ ವೆಚ್ಚವಾಗುತ್ತದೆ.
ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಶ್ವೇತಭವನ ದೌಡು
ಯುದ್ಧದ ಆರಂಭದಲ್ಲಿಯೇ ಕತಾರ್‌ನಲ್ಲಿದ್ದ ಎಎನ್/ಎಫ್‌ಪಿಎಸ್-132 (AN/FPS-132) ಎಂಬ ಮುನ್ಸೂಚನೆ ನೀಡುವ ರೇಡಾರ್ ಕೂಡ ಇರಾನ್ ದಾಳಿಯಲ್ಲಿ ಹಾನಿಗೊಳಗಾಗಿತ್ತು. ಗಲ್ಫ್ ಪ್ರದೇಶದಲ್ಲಿ ಇರಾನ್‌ನ ನಿರಂತರ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳಿಂದಾಗಿ ಅಮೆರಿಕದ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ತೀವ್ರ ಒತ್ತಡಕ್ಕೆ ಸಿಲುಕಿವೆ. ಥಾಡ್ ಮತ್ತು ಪಿಎಸಿ-3 ನಂತಹ ಅತ್ಯಾಧುನಿಕ ಇಂಟರ್‌ಸೆಪ್ಟರ್‌ಗಳ ದಾಸ್ತಾನು ಶೀಘ್ರದಲ್ಲೇ ಖಾಲಿಯಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಪೆಂಟಗನ್ ಲಾಕ್‌ಹೀಡ್ ಮತ್ತು ಆರ್‌ಟಿಎಕ್ಸ್ ಸೇರಿದಂತೆ ಪ್ರಮುಖ ರಕ್ಷಣಾ ಗುತ್ತಿಗೆದಾರರೊಂದಿಗೆ ಶ್ವೇತಭವನದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಸಿದೆ.



















