ಬೆಂಗಳೂರು: ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಬಹುನಿರೀಕ್ಷಿತ ‘XUV 3XO EV’ ಅಂತಿಮವಾಗಿ ಬಿಡುಗಡೆಯಾಗಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಈಗಾಗಲೇ ಉತ್ತಮ ಹೆಸರು ಮಾಡಿರುವ XUV 3XO ಮಾದರಿಯ ಎಲೆಕ್ಟ್ರಿಕ್ ಆವೃತ್ತಿ ಇದಾಗಿದ್ದು, 13.89 ಲಕ್ಷ ರೂಪಾಯಿಗಳ (ಎಕ್ಸ್ ಶೋರೂಂ) ಆಕರ್ಷಕ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಹೊಸ ಮಾದರಿಯು ನೇರವಾಗಿ ಟಾಟಾ ನೆಕ್ಸಾನ್ ಇವಿ ಮತ್ತು ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ನಗರ ಪ್ರದೇಶದ ಗ್ರಾಹಕರನ್ನು ಸೆಳೆಯುವ ಗುರಿಯನ್ನು ಹೊಂದಿದೆ.
ವೇರಿಯೆಂಟ್‌ಗಳು ಮತ್ತು ಬೆಲೆ ವಿವರ
ಮಹೀಂದ್ರಾ ಕಂಪನಿಯು ತನ್ನ ನೂತನ ಎಲೆಕ್ಟ್ರಿಕ್ ಕಾರನ್ನು ಪ್ರಮುಖವಾಗಿ ಎರಡು ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ. ಆರಂಭಿಕ ಆವೃತ್ತಿಯಾದ AX5 ಮಾಡೆಲ್ ಬೆಲೆ 13.89 ಲಕ್ಷ ರೂಪಾಯಿಗಳಾಗಿದ್ದರೆ, ಉನ್ನತ ಶ್ರೇಣಿಯ AX7L ಆವೃತ್ತಿಯ ಬೆಲೆ 14.96 ಲಕ್ಷ ರೂಪಾಯಿಗಳೆಂದು (ಎಕ್ಸ್ ಶೋರೂಂ) ನಿಗದಿಪಡಿಸಲಾಗಿದೆ. ಗ್ರಾಹಕರು ಇಂದಿನಿಂದಲೇ ಬುಕ್ಕಿಂಗ್ ಮಾಡಬಹುದಾಗಿದ್ದು, ವಾಹನಗಳ ವಿತರಣೆಯು 2026ರ ಫೆಬ್ರವರಿ 23ರಿಂದ ಆರಂಭವಾಗಲಿದೆ ಎಂದು ಕಂಪನಿ ಪ್ರಕಟಿಸಿದೆ.

ಬ್ಯಾಟರಿ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ
XUV 3XO EV ಯ ಪ್ರಮುಖ ಆಕರ್ಷಣೆ ಅದರ ಪವರ್‌ಟ್ರೇನ್ ಆಗಿದೆ. ಈ ವಾಹನವು 39.4kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 285 ಕಿಲೋಮೀಟರ್‌ಗಳವರೆಗೆ ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಕಾರ್ಯಕ್ಷಮತೆಯ ವಿಷಯಕ್ಕೆ ಬರುವುದಾದರೆ, ಇದರಲ್ಲಿನ ಎಲೆಕ್ಟ್ರಿಕ್ ಮೋಟಾರ್ 150bhp ಗರಿಷ್ಠ ಪವರ್ ಮತ್ತು ಬರೋಬ್ಬರಿ 310Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಶಕ್ತಿಯ ನೆರವಿನಿಂದ ಈ ಎಸ್‌ಯುವಿ ಕೇವಲ 8.3 ಸೆಕೆಂಡುಗಳಲ್ಲಿ ಗಂಟೆಗೆ 0 ಇಂದ 100 ಕಿಲೋಮೀಟರ್ ವೇಗವನ್ನು ತಲುಪಬಲ್ಲದು. ಇದು ಈ ವಿಭಾಗದಲ್ಲೇ ಅತ್ಯಂತ ವೇಗದ ವೇಗೋತ್ಕರ್ಷ ಎಂದು ಹೇಳಲಗಿದೆ.
ಚಾರ್ಜಿಂಗ್ ವಿಷಯದಲ್ಲಿಯೂ ಮಹೀಂದ್ರಾ ಗ್ರಾಹಕರಿಗೆ ಅನುಕೂಲ ಕಲ್ಪಿಸಿದೆ. 50kW ಡಿಸಿ ಫಾಸ್ಟ್ ಚಾರ್ಜರ್ ಬಳಸಿದಾಗ ಕೇವಲ 50 ನಿಮಿಷಗಳಲ್ಲಿ ಶೇ.0 ರಿಂದ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಚಾಲನೆಯ ಅನುಭವವನ್ನು ಹೆಚ್ಚಿಸಲು ‘ಫನ್’, ‘ಫಾಸ್ಟ್’ ಮತ್ತು ‘ಫಿಯರ್‌ಲೆಸ್’ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಹೊರನೋಟಕ್ಕೆ ಈ ಎಲೆಕ್ಟ್ರಿಕ್ ಕಾರು ತನ್ನ ಪೆಟ್ರೋಲ್/ಡೀಸೆಲ್ ಆವೃತ್ತಿಯನ್ನೇ ಹೋಲುತ್ತದೆಯಾದರೂ, ಎಲೆಕ್ಟ್ರಿಕ್ ವಾಹನಕ್ಕೆ ತಕ್ಕದಾದ ಬ್ಯಾಡ್ಜಿಂಗ್‌ಗಳು ಮತ್ತು ವಿನ್ಯಾಸದ ಬದಲಾವಣೆಗಳನ್ನು ಕಾಣಬಹುದು. AX5 ಆವೃತ್ತಿಯಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಒಳಾಂಗಣದಲ್ಲಿ ಎರಡು 10.25 ಇಂಚಿನ ಎಚ್‌ಡಿ ಡಿಸ್‌ಪ್ಲೇಗಳು (ಇನ್ಫೋಟೈನ್ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ), ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನಂತಹ ಸೌಲಭ್ಯಗಳಿವೆ.
ಇನ್ನು ಟಾಪ್ ಎಂಡ್ AX7L ಆವೃತ್ತಿಯಲ್ಲಿ ಮಹೀಂದ್ರಾದ ಸಿಗ್ನೇಚರ್ ಸ್ಕೈರೂಫ್ (ಪನೋರಮಿಕ್ ಸನ್‌ರೂಫ್), 17 ಇಂಚಿನ ಅಲಾಯ್ ವೀಲ್‌ಗಳು, ಲೆದರೆಟ್ ಸೀಟುಗಳು ಮತ್ತು ಡ್ಯಾಶ್‌ಬೋರ್ಡ್ ಮೇಲೆ ಸಾಫ್ಟ್ ಟಚ್ ಫಿನಿಶಿಂಗ್ ನೀಡಲಾಗಿದೆ. ಮನರಂಜನೆಗಾಗಿ ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಮ್ ಮತ್ತು ಅಡ್ರಿನಾಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಸುರಕ್ಷತೆಗೆ ಹೆಚ್ಚಿನ ಆದ್ಯತೆ
ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ರಾಜಿ ಮಾಡಿಕೊಂಡಿಲ್ಲ. ಎಲ್ಲಾ ಆವೃತ್ತಿಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಪ್ರಮುಖವಾಗಿ AX7L ಆವೃತ್ತಿಯಲ್ಲಿ ಲೆವೆಲ್-2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ತಂತ್ರಜ್ಞಾನವಿದ್ದು, ಇದರಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಅತ್ಯಾಧುನಿಕ ಸೌಲಭ್ಯಗಳಿವೆ. ಜೊತೆಗೆ 360 ಡಿಗ್ರಿ ಕ್ಯಾಮೆರಾ ಕೂಡ ಲಭ್ಯವಿದ್ದು, ನಗರದ ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಯದಲ್ಲಿ ಚಾಲಕರಿಗೆ ನೆರವಾಗಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2024ರ ಏಪ್ರಿಲ್‌ನಲ್ಲಿ ಬಿಡುಗಡೆಯಾದ ನಂತರ ಸುಮಾರು 1.8 ಲಕ್ಷ ಯುನಿಟ್‌ಗಳಷ್ಟು ಮಾರಾಟವಾಗಿ ಯಶಸ್ವಿಯಾಗಿರುವ XUV 3XO ಬ್ರಾಂಡ್‌ನ ವಿಶ್ವಾಸಾರ್ಹತೆಯನ್ನು ಈ ಎಲೆಕ್ಟ್ರಿಕ್ ಆವೃತ್ತಿ ಕೂಡ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಬೆಲೆ ಮತ್ತು ಫೀಚರ್‌ಗಳ ಸಮತೋಲನವನ್ನು ಗಮನಿಸಿದರೆ, ಇದು ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆಯೊಡ್ಡುವುದು ಖಚಿತವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿರುವ IIMBಯಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ | ಬಿ.ಕಾಂ ಪಾಸಾಗಿದ್ದರೆ ಸಾಕು



















