ಬೆಂಗಳೂರು : ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ‘ಮಹೀಂದ್ರಾ BE6 ಬ್ಯಾಟ್‌ಮ್ಯಾನ್ ಎಡಿಷನ್’ (Mahindra BE6 Batman Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಾರುಕಟ್ಟೆಗೆ ಮರುಪರಿಚಯಿಸಲು ಮುಂದಾಗಿದೆ. ವಾಹನ ಪ್ರಿಯರ ನಿರಂತರ ಬೇಡಿಕೆಯನ್ನು ಪರಿಗಣಿಸಿ ಮಹೀಂದ್ರಾ ಸಂಸ್ಥೆಯು ಈ ವಿಶೇಷ ಆವೃತ್ತಿಯನ್ನು 28.49 ಲಕ್ಷ ರೂಪಾಯಿಗಳ (ಎಕ್ಸ್-ಶೋರೂಂ) ಆಕರ್ಷಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಬ್ಯಾಟ್‌ಮ್ಯಾನ್ ಎಡಿಷನ್ ಕೇವಲ ಕ್ಷಣಾರ್ಧದಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು, ಇದೀಗ ಅದೇ ಕ್ರೇಜ್ ಸೃಷ್ಟಿಸಲು ಮತ್ತೆ ವಾಹನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಅಭಿಮಾನಿಯ ಮನವಿಗೆ ಸ್ಪಂದಿಸಿದ ಮಹೀಂದ್ರಾ ಆಡಳಿತ ಮಂಡಳಿ
ತನ್ನ ಮಗನಿಗಾಗಿ ಮಹೀಂದ್ರಾ ಬಿಇ6 ಬ್ಯಾಟ್‌ಮ್ಯಾನ್ ಎಡಿಷನ್ ಕಾರನ್ನು ಬುಕ್ ಮಾಡಲು ಸಾಧ್ಯವಾಗದ ಕಾರಣ, ಅಭಿಮಾನಿಯೊಬ್ಬರು (ತಾಯಿ) ಆನ್‌ಲೈನ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಅರ್ಜಿಯಲ್ಲಿ, ತಮಗೆ ಕಾರು ಬುಕ್ ಮಾಡಲು ಇನ್ನೊಂದು ಅವಕಾಶ ನೀಡುವಂತೆ ಹಾಗೂ ಈ ವಿಶೇಷ ಆವೃತ್ತಿಯನ್ನು ಸೀಮಿತ ಸಂಖ್ಯೆಯಲ್ಲಿ ಮರುಪರಿಚಯಿಸುವಂತೆ ಮಹೀಂದ್ರಾ ಕಂಪನಿಗೆ ಮನವಿ ಮಾಡಲಾಗಿತ್ತು. ಈ ವಿಶೇಷ ಮನವಿಗೆ ಸ್ಪಂದಿಸಿರುವ ಮಹೀಂದ್ರಾ, ಎಲ್ಲಾ ಬ್ಯಾಟ್‌ಮ್ಯಾನ್ ಅಭಿಮಾನಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಎಡಿಷನ್ ಅನ್ನು ಮತ್ತೆ ಮಾರುಕಟ್ಟೆಗೆ ತರಲು ನಿರ್ಧರಿಸಿದೆ.
ವರದಿಗಳ ಪ್ರಕಾರ, ಈ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯು 2026ರ ಮಾರ್ಚ್ 10ರಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು, ಕೇವಲ ಒಂದು ದಿನದ ಮಟ್ಟಿಗೆ ಮಾತ್ರ ಗ್ರಾಹಕರಿಗೆ ಲಭ್ಯವಿರುತ್ತದೆ. ಅಲ್ಲದೆ, ಹೊಸದಾಗಿ ಬುಕ್ ಮಾಡಲಾದ ಬ್ಯಾಟ್‌ಮ್ಯಾನ್ ಎಡಿಷನ್ ಕಾರುಗಳ ವಿತರಣೆಯು 2026ರ ಏಪ್ರಿಲ್ 10ರಿಂದ ಆರಂಭವಾಗಲಿದೆ.
ಕೇವಲ 135 ಸೆಕೆಂಡ್‌ಗಳಲ್ಲಿ ಸೋಲ್ಡ್ ಔಟ್ ಆಗಿದ್ದ ಹಿಂದಿನ ದಾಖಲೆ
ಹಿಂದಿನ ಬ್ಯಾಚ್‌ನಲ್ಲಿ, ಮಹೀಂದ್ರಾ ಕಂಪನಿಯು ಆರಂಭದಲ್ಲಿ ಕೇವಲ 300 ಬ್ಯಾಟ್‌ಮ್ಯಾನ್ ಎಡಿಷನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲು ಘೋಷಿಸಿತ್ತು. ಆದರೆ ಗ್ರಾಹಕರಿಂದ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಕಂಡು, ಈ ಸಂಖ್ಯೆಯನ್ನು 999 ಯೂನಿಟ್‌ಗಳಿಗೆ ಹೆಚ್ಚಿಸಲಾಯಿತು. ಅಚ್ಚರಿಯ ವಿಚಾರವೆಂದರೆ, ಬುಕ್ಕಿಂಗ್ ಆರಂಭವಾದ ದಿನದಂದು ಬರೋಬ್ಬರಿ 28 ಲಕ್ಷ ರೂ. ಬೆಲೆಯ ಎಲ್ಲಾ 999 ಕಾರುಗಳು ಕೇವಲ 135 ಸೆಕೆಂಡ್‌ಗಳಲ್ಲಿ ಸಂಪೂರ್ಣವಾಗಿ ಮಾರಾಟವಾಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದವು. ಈ ಹಿಂದೆ ಬಿಡುಗಡೆಯಾಗಿದ್ದ ಬ್ಯಾಟ್‌ಮ್ಯಾನ್ ಎಡಿಷನ್‌ನ ಬೆಲೆಯು 27.79 ಲಕ್ಷ ರೂಪಾಯಿಗಳಷ್ಟಿತ್ತು (ಎಕ್ಸ್-ಶೋರೂಂ).
ಡಾರ್ಕ್ ನೈಟ್ ಸ್ಫೂರ್ತಿಯ ಹೊರಾಂಗಣ ವಿನ್ಯಾಸ
ಹೊಸ ಮಹೀಂದ್ರಾ BE6 ಬ್ಯಾಟ್‌ಮ್ಯಾನ್ ಎಡಿಷನ್ ಕಾರು, BE6 ಎಲೆಕ್ಟ್ರಿಕ್ ಎಸ್‌ಯುವಿಯ ಟಾಪ್-ಎಂಡ್ ‘ಪ್ಯಾಕ್ 3’ (Pack 3) ರೂಪಾಂತರವನ್ನು ಆಧರಿಸಿದೆ. ಸಾಮಾನ್ಯ BE6 ಕಾರಿಗಿಂತ ಈ ವಿಶೇಷ ಆವೃತ್ತಿಯಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದ್ದು, ಸಂಪೂರ್ಣ ಕಾರಿನ ವಿನ್ಯಾಸವು ಪ್ರಸಿದ್ಧ ‘ದಿ ಡಾರ್ಕ್ ನೈಟ್ ಟ್ರೈಲಾಜಿ’ಯಿಂದ (The Dark Knight Trilogy) ಸ್ಫೂರ್ತಿ ಪಡೆದಿದೆ. ಕಾರಿನ ಹೊರಾಂಗಣವು ಸ್ಯಾಟಿನ್ ಬ್ಲಾಕ್ ಬಣ್ಣವನ್ನು ಹೊಂದಿದ್ದು, ಇದಕ್ಕೆ ಕಾಂಟ್ರಾಸ್ಟ್ ಆಗಿ ಗ್ಲಾಸ್ ಬ್ಲಾಕ್ ಎಲಿಮೆಂಟ್‌ಗಳನ್ನು ಅಳವಡಿಸಲಾಗಿದೆ. ಕಾರಿನ ಮುಂಭಾಗವು ಸಾಮಾನ್ಯ ಮಾದರಿಯಂತೆಯೇ ಇದ್ದರೂ, ಪಾರ್ಶ್ವದಲ್ಲಿ 20-ಇಂಚಿನ ಏರೋ-ಬ್ಲೇಡ್ ಅಲಾಯ್ ವೀಲ್‌ಗಳನ್ನು ನೀಡಲಾಗಿದ್ದು, ಹಬ್‌ಕ್ಯಾಪ್‌ಗಳ ಮಧ್ಯದಲ್ಲಿ ಬ್ಯಾಟ್‌ಮ್ಯಾನ್ ಲೋಗೋ ರಾರಾಜಿಸುತ್ತಿದೆ.
ಮುಂಭಾಗದ ಫೆಂಡರ್ ಮೇಲೆ ಬ್ರಷ್ಡ್ ಆಲ್ಕೆಮಿ ಗೋಲ್ಡ್ ಬಣ್ಣದ ಬ್ಯಾಟ್‌ಮ್ಯಾನ್ ಲೋಗೋ, ಮುಂಭಾಗದ ಬಾಗಿಲಿನ ಮೇಲೆ ಕಸ್ಟಮ್ ಬ್ಯಾಟ್‌ಮ್ಯಾನ್ ಡಿಕಾಲ್ ಅನ್ನು ನೀಡಲಾಗಿದೆ. ಇದರ ಜೊತೆಗೆ ಹಿಂಭಾಗದ ಟೈಲ್‌ಗೇಟ್, ಎಲ್ಲಾ ಕಿಟಕಿಗಳು ಮತ್ತು ಹಿಂಬದಿಯ ವಿಂಡ್‌ಶೀಲ್ಡ್ ಮೇಲೂ ಬ್ಯಾಟ್‌ಮ್ಯಾನ್ ಲೋಗೋಗಳನ್ನು ಹಾಗೂ ಬ್ರ್ಯಾಂಡಿಂಗ್ ಅನ್ನು ಒದಗಿಸಲಾಗಿದೆ.
ಐಷಾರಾಮಿ ಹಾಗೂ ಕಸ್ಟಮೈಸ್ಡ್ ಒಳಾಂಗಣ
ಕಾರಿನ ಒಳಾಂಗಣದಲ್ಲಿಯೂ ಆಲ್-ಬ್ಲಾಕ್ ಮತ್ತು ಬ್ರಷ್ಡ್ ಆಲ್ಕೆಮಿ ಗೋಲ್ಡ್ ಥೀಮ್ ಅನ್ನು ಮುಂದುವರಿಸಲಾಗಿದೆ. ಡ್ಯಾಶ್‌ಬೋರ್ಡ್ ಮೇಲೆ ನಂಬರಿಂಗ್ ಹೊಂದಿರುವ ಬ್ರಷ್ಡ್ ಆಲ್ಕೆಮಿ ಗೋಲ್ಡ್ ಬ್ಯಾಟ್‌ಮ್ಯಾನ್ ಎಡಿಷನ್ ಪ್ಲೇಕ್ ಅನ್ನು ಅಳವಡಿಸಲಾಗಿದೆ. ಚಾಲಕನ ಕಾಕ್‌ಪಿಟ್ ಸುತ್ತಲೂ ಬ್ರಷ್ಡ್ ಗೋಲ್ಡ್ ಹ್ಯಾಲೊ (halo) ಹೊಂದಿರುವ ಚಾರ್ಕೋಲ್ ಲೆದರ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್ (IP), ಗೋಲ್ಡ್ ಸೆಪಿಯಾ ಆಕ್ಸೆಂಟ್ ಸ್ಟಿಚಿಂಗ್ ಹೊಂದಿರುವ ಸ್ಯೂಡ್ ಮತ್ತು ಲೆದರ್ ಅಪ್ಹೋಲ್ಸ್ಟರಿ ಕಾರಿನ ಅಂದವನ್ನು ಹೆಚ್ಚಿಸಿವೆ. ಇಂಟಿಗ್ರೇಟೆಡ್ ಡಾರ್ಕ್ ನೈಟ್ ಟ್ರೈಲಾಜಿ ಬ್ಯಾಟ್ ಲಾಂಛನ, ಗೋಲ್ಡ್-ಆಕ್ಸೆಂಟೆಡ್ ಸ್ಟೀರಿಂಗ್ ವೀಲ್, ಇನ್-ಟಚ್ ಕಂಟ್ರೋಲರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಆಲ್ಕೆಮಿ ಗೋಲ್ಡ್ ಡೀಟೇಲಿಂಗ್ ಇರುವ ಕಸ್ಟಮ್ ಕೀ ಫೋಬ್ ಅನ್ನು ಇದು ಒಳಗೊಂಡಿದೆ. ‘ಬೂಸ್ಟ್’ ಬಟನ್, ಸೀಟ್‌ಗಳು, ಪ್ಯಾಸೆಂಜರ್-ಸೈಡ್ ಡ್ಯಾಶ್‌ಬೋರ್ಡ್ ಪ್ಯಾನೆಲ್ ಮತ್ತು ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಮೇಲಿನ ವೆಲ್‌ಕಮ್ ಅನಿಮೇಷನ್‌ನಲ್ಲಿ ಬ್ಯಾಟ್‌ಮ್ಯಾನ್ ಲಾಂಛನಗಳನ್ನು ಕಾಣಬಹುದು. ರೇಸ್ ಕಾರುಗಳಿಂದ ಸ್ಫೂರ್ತಿ ಪಡೆದ ಓಪನ್ ಸ್ಟ್ರಾಪ್‌ಗಳು, ಕಸ್ಟಮ್ ಬ್ಯಾಟ್‌ಮ್ಯಾನ್-ಸ್ಫೂರ್ತಿಯ ಇಂಜಿನ್ ಸೌಂಡ್ ಹಾಗೂ ಇನ್ಫಿನಿಟಿ ರೂಫ್ ಮೇಲೆ ಬ್ಯಾಟ್‌ಮ್ಯಾನ್ ಟ್ರೈಲಾಜಿ ಬ್ಯಾಟ್ ಲಾಂಛನವನ್ನು ನೀಡಿರುವುದು ಕಾರಿನ ಪ್ರೀಮಿಯಂ ಅನುಭವವನ್ನು ಹೆಚ್ಚಿಸಿದೆ.
ಪವರ್‌ಫುಲ್ ಬ್ಯಾಟರಿ ಮತ್ತು ಅತ್ಯುತ್ತಮ ಮೈಲೇಜ್
ಈ ಕಾರು ಪ್ಯಾಕ್ 3 ವೇರಿಯೆಂಟ್ ಅನ್ನು ಆಧರಿಸಿರುವುದರಿಂದ, ಇದು 79 kWh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಬ್ಯಾಟರಿಯು ಬರೋಬ್ಬರಿ 683 ಕಿ.ಮೀ ಗಳ ಭರ್ಜರಿ ರೇಂಜ್ (ಮೈಲೇಜ್) ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಅಲ್ಲದೆ, ಇದು 282 bhp ಪವರ್ ಮತ್ತು 380 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಅದ್ಭುತ ಕಾರ್ಯಕ್ಷಮತೆಯನ್ನು ಹೊಂದಿದೆ.
ಇದನ್ನೂ ಓದಿ : ಒಳಮೀಸಲು ಬಿಸಿ ತುಪ್ಪ.. ‘ಕೈ’ ವಿಲವಿಲ!



















