ಮುಂಬೈ: ಕಳೆದ ಡಿಸೆಂಬರ್‌ನಲ್ಲಿ ಬೀಡ್ ಜಿಲ್ಲೆಯಲ್ಲಿ ನಡೆದ ಸರಪಂಚ್ ಹತ್ಯೆ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಮಂಗಳವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಸರಪಂಚ್ ಕೊಲೆಯಲ್ಲಿ ಸಚಿವ ಧನಂಜಯ್ ಮುಂಡೆ ಅವರ ಆಪ್ತರೊಬ್ಬರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮಸಾಜೋಗ್ ಗ್ರಾಮದ ಸರಪಂಚ್ ಸಂತೋಷ್ ದೇಶ್‌ಮುಖ್ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಸಚಿವರ ಸಹಾಯಕ ವಾಲ್ಮೀಕಿ ಕಾರಡ್ ಅವರನ್ನು ಪೊಲೀಸರು ಬಂಧಿಸಿದ್ದು, ಅದರ ನಂತರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೂಚನೆಯ ಮೇರೆಗೆ ಮುಂಡೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇಂಧನ ಕಂಪನಿಯೊಂದರಿಂದ ಹಣ ವಸೂಲಿಗೆ ನಡೆದ ಯತ್ನವನ್ನು ತಡೆಯಲು ಮುಂದಾಗಿದ್ದ ಸರಪಂಚ್ ಸಂತೋಷ್ ದೇಶ್‌ಮುಖ್ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. 2024ರ ಡಿಸೆಂಬರ್ 9ರಂದು ಈ ಕೊಲೆ ನಡೆದಿತ್ತು. ದೇಹಪೂರ್ತಿ ಗಾಯಗಳೊಂದಿಗೆ ದೇಶ್‌ಮುಖ್ ಅವರ ಮೃತದೇಹ ರಸ್ತೆ ಬದಿ ಪತ್ತೆಯಾಗಿತ್ತು. ಈ ಪ್ರಕರಣವು ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಮಹಾರಾಷ್ಟ್ರ ಮಹಾಯುತಿಯಲ್ಲಿ ಹೆಚ್ಚಿದ ಬಿರುಕು: ಶಿಂಧೆ ಶಿವಸೇನೆಯ 20 ಶಾಸಕರ ವೈ ಕೆಟಗರಿ ಭದ್ರತೆ ವಾಪಸ್?
ಆರೋಪಿಗಳು ಸರಪಂಚ್ ಸಂತೋಷ್ ದೇಶ್ ಮುಖ್ ಅವರ ಮೇಲೆ ಮಧ್ಯಾಹ್ನ 3.30ರಿಂದ ಸಂಜೆ 6ರವರೆಗೆ ನಿರಂತರವಾಗಿ ಹಲ್ಲೆ ನಡೆಸಿತ್ತು. 41 ಇಂಚುಗಳ ಗ್ಯಾಸ್ ಪೈಪ್, ಕಬ್ಬಿಣದ ರಾಡ್, ಮರದ ಕೋಲಿನಲ್ಲಿ ಹೊಡೆಯಲಾಗಿತ್ತು. ಜೊತೆಗೆ ಚೂಪಾದ ಆಯುಧಗಳಿಗೆ ಮೈಗೆಲ್ಲ ಚುಚ್ಚಲಾಗಿತ್ತು. ಈ ಚಿತ್ರಹಿಂಸೆಯ 15 ವಿಡಿಯೋ ಮತ್ತು 8 ಫೋಟೋಗಳನ್ನೂ ದುಷ್ಕರ್ಮಿಗಳು ಸೆರೆಹಿಡಿದಿದ್ದರು. ಅದರಲ್ಲಿ ರಕ್ತದಿಂದ ತೋಯ್ದು ಹೋಗಿದ್ದ ದೇಶ್‌ಮುಖ್ ಅವರ ಮೇಲೆ ಒಬ್ಬ ಆರೋಪಿಯು ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯವೂ ಇದೆ. ಪೊಲೀಸರು ಕಳೆದ ವಾರ ಬೀಡ್ ಜಿಲ್ಲೆಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವ ವೇಳೆ ಈ ಎಲ್ಲ ವಿಡಿಯೋಗಳನ್ನೂ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಲ್ಮೀಕ್ ಕರಾಡ್ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಾಲ್ಮೀಕ್ ಕರಾಡ್ ಸಚಿವ ಧನಂಜಯ್ ಮುಂಡೆ ಅವರ ಆಪ್ತರಾಗಿರುವ ಕಾರಣ, ಈಗ ಸಚಿವರ ತಲೆದಂಡವಾಗಿದೆ ಎಂದು ಮೂಲಗಳು ತಿಳಿಸಿವೆ.