ಮುಂಬೈ: ವಿಧಾನಸಭೆಯಲ್ಲಿ ರಮ್ಮಿ ಆಡಿರುವ ಆರೋಪ ಮತ್ತು ರೈತರ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಮಹಾರಾಷ್ಟ್ರದ ಕೃಷಿ ಸಚಿವ ಮಾಣಿಕರಾವ್ ಕೋಕಾಟೆ ಅವರನ್ನು ಅವರ ಖಾತೆಯಿಂದ ತೆಗೆದುಹಾಕಲಾಗಿದೆ. ಆದರೆ, ಅದರ ಬದಲಾಗಿ ಅವರಿಗೆ ಕ್ರೀಡೆ ಮತ್ತು ಯುವಜನ ಕಲ್ಯಾಣ ಸಚಿವಾಲಯದ ಜವಾಬ್ದಾರಿ ನೀಡಲಾಗಿದೆ. ಅವರ ಸ್ಥಾನಕ್ಕೆ ದತ್ತಾತ್ರೇಯ ಭರಣೆ ಅವರನ್ನು ನೂತನ ಕೃಷಿ ಸಚಿವರನ್ನಾಗಿ ನೇಮಿಸಲಾಗಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನಡೆಸಿದ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೋಕಾಟೆಯವರು ಪವಾರ್ ಅವರ ಎನ್‌ಸಿಪಿ ಬಣಕ್ಕೆ ಸೇರಿದವರಾಗಿದ್ದಾರೆ.
ಏನಿದು ವಿವಾದ?
ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದಾಗ ಕೋಕಾಟೆ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಆನ್ಲೈನ್ ರಮ್ಮಿ ಆಡುತ್ತಿದ್ದರು ಎನ್ನಲಾದ ವೀಡಿಯೊವೊಂದು ವೈರಲ್ ಆಗಿತ್ತು. ಈ ಘಟನೆಯು ವಿರೋಧ ಪಕ್ಷಗಳಿಂದ ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆದಾಗ್ಯೂ, ಕೋಕಾಟೆಯವರು ಈ ಆರೋಪಗಳನ್ನು ನಿರಾಕರಿಸಿದ್ದು, ತಾವು ಗೇಮ್ ಆಡುತ್ತಿರಲಿಲ್ಲ, ಬದಲಿಗೆ ತಮ್ಮ ಮೊಬೈಲ್ ನಲ್ಲಿ ಕಾಣಿಸಿಕೊಂಡ ಪಾಪ್-ಅಪ್ ಜಾಹೀರಾತನ್ನು ಮುಚ್ಚಲು ಪ್ರಯತ್ನಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.
ಈ ಹಿಂದಿನ ವಿವಾದಗಳು
ರೈತರ ಕುರಿತಾದ ಅವರ ಹಿಂದಿನ ಹೇಳಿಕೆಗಳು ಕೂಡ ಮುಖ್ಯಮಂತ್ರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲವು ತಿಂಗಳ ಹಿಂದೆ ಸರ್ಕಾರದ ಬೆಳೆ ವಿಮೆ ಯೋಜನೆ ಬಗ್ಗೆ ಮಾತನಾಡುತ್ತಾ, “ಇತ್ತೀಚಿನ ದಿನಗಳಲ್ಲಿ ಭಿಕ್ಷುಕರು ಕೂಡ ಒಂದು ರೂಪಾಯಿ ತೆಗೆದುಕೊಳ್ಳುವುದಿಲ್ಲ. ಆದರೆ, ನಾವು ರೈತರಿಗೆ ಒಂದು ರೂಪಾಯಿಗೆ ಬೆಳೆ ವಿಮೆ ನೀಡಿದ್ದೇವೆ. ಕೆಲವರು ಈ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಹೇಳಿದ್ದರು. ಇದಲ್ಲದೆ, “ರೈತರು ಸಾಲ ಮನ್ನಾಕ್ಕಾಗಿ 5 ರಿಂದ 10 ವರ್ಷಗಳವರೆಗೆ ಸಾಲ ಮರುಪಾವತಿ ಮಾಡುವುದಿಲ್ಲ. ಕೃಷಿ ಯೋಜನೆಗಳಿಂದ ಬರುವ ಹಣವನ್ನು ನಿಶ್ಚಿತಾರ್ಥ ಮತ್ತು ಮದುವೆ ಸಮಾರಂಭಗಳಿಗೆ ಖರ್ಚು ಮಾಡುತ್ತಾರೆ,” ಎಂದೂ ಅವರು ಆರೋಪಿಸಿದ್ದರು.
ಪದೇ ಪದೇ ವಿವಾದಗಳಲ್ಲಿ ಸಿಲುಕುವ ಮೂಲಕ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಬಾರದು ಎಂದು ಮುಖ್ಯಮಂತ್ರಿ ಫಡ್ನವಿಸ್ ಅವರು ತಮ್ಮ ಸಚಿವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೋಕಾಟೆಯವರ ಖಾತೆಯನ್ನು ಬದಲಾಯಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.



















