ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಮಗವು (ಎಲ್ಐಸಿ) ಭಾರತೀಯರ ವಿಶ್ವಾಸ ಗಳಿಸಿದೆ. ಅದರಲ್ಲೂ, ವಿಮೆಯ ಜತೆಗೆ ಹೂಡಿಕೆ ದೃಷ್ಟಿಯಲ್ಲೂ ಈಗ ಎಲ್ಐಸಿ ಉತ್ತಮ ಮಾರ್ಗವಾಗಿದೆ. ಇದರ ಬೆನ್ನಲ್ಲೇ, ಎಲ್ಐಸಿಯು ನಿಶ್ಚಿತ ಠೇವಣಿ (ಎಫ್ ಡಿ) ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಹಿರಿಯ ನಾಗರಿಕರು ಎಫ್ ಡಿ ಇರಿಸಿದರೆ, ಅವರಿಗೆ ಹೆಚ್ಚಿ ಬಡ್ಡಿಯ ಲಾಭ ಸಿಗುತ್ತದೆ. ಹೊಸ ಬಡ್ಡಿದರದ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಒಂದು ವರ್ಷದ ಎಫ್ ಡಿ ಗೆ ಹಿರಿಯ ನಾಗರಿಕರಿಗೆ 7.30% ಬಡ್ಡಿದರವಿದ್ದು, 5 ವರ್ಷಗಳ ಎಫ್ ಡಿ ಗೆ 8% ಬಡ್ಡಿದರವನ್ನು ಘೋಷಿಸಲಾಗಿದೆ. ಇದು ಇತರ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಎಫ್ ಡಿ ಗಳಿಗಿಂತ ಹೆಚ್ಚಿನ ಲಾಭವನ್ನು ನೀಡುತ್ತದೆ. ಬ್ಯಾಂಕುಗಳಲ್ಲಿ ಹೆಚ್ಚಾಗಿ 0.25% ಅಥವಾ 0.40% ಹೆಚ್ಚುವರಿ ಬಡ್ಡಿ ದೊರೆಯುವಂತೆ ಇದ್ದರೂ, ಎಲ್ಐಸಿಯ 8% ಬಡ್ಡಿದರ ಹೆಚ್ಚು ಆಕರ್ಷಕವಾಗಿದೆ.
ಎಲ್ಐಸಿಯು ಹಳೆಯ ಹೂಡಿಕೆದಾರರಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ಸರ್ಕಾರದ ಬೆಂಬಲ ಹೊಂದಿರುವ ಕಾರಣದಿಂದಾಗಿ ಹೆಚ್ಚು ನಂಬಿಕಸ್ಥ ಆಯ್ಕೆಯಾಗಿ ಖ್ಯಾತಿ ಗಳಿಸಿದೆ. ಹೆಚ್ಚುವರಿ ಬಡ್ಡಿದರ, ವಿಭಿನ್ನ ಅವಧಿ ಆಯ್ಕೆ, ಮಾರುಕಟ್ಟೆ ಏರಿಳಿತಗಳ ಪ್ರಭಾವವಿಲ್ಲದ ಸ್ಥಿರ ಆದಾಯ ಮತ್ತು 5 ವರ್ಷಗಳ ಎಫ್ ಡಿಗಳ ಮೇಲೆ ತೆರಿಗೆ ವಿನಾಯಿತಿಯಂತಹ ಹಲವು ಪ್ರಯೋಜನಗಳು ಇವೆ.
ಹಿರಿಯ ನಾಗರಿಕರು ಎಫ್ ಡಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ತುಂಬಾ ಸರಳವಾಗಿದೆ. ಹತ್ತಿರದ ಎಲ್ಐಸಿ ಕಚೇರಿಗೆ ಭೇಟಿ ನೀಡಿ, ಪ್ಯಾನ್, ಆಧಾರ್ ಮತ್ತು ವಯಸ್ಸಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ನಿಮ್ಮ ಅವಶ್ಯಕತೆಗೆ ತಕ್ಕ ಎಫ್ ಡಿ ಅವಧಿಯನ್ನು ಆಯ್ಕೆಮಾಡಿ, ಹಣವನ್ನು ಠೇವಣಿ ಮಾಡಬಹುದು. ಹಾಗೆಯೇ, ಎಲ್ಐಸಿ ಪೋರ್ಟಲ್ ಮೂಲಕ ಆನ್ ಲೈನ್ ನಲ್ಲೂ ಸುಲಭವಾಗಿ ಅರ್ಜಿ ಹಾಕಬಹುದು. ಮನೆಯಲ್ಲೇ ಕುಳಿತು ಕೂಡ ಈಗ ಎಫ್ ಡಿ ಹೂಡಿಕೆ ಮಾಡಬಹುದು.



















