ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ನೋಡಲು, ಕುಟುಂಬಸ್ಥರೊಂದಿಗೆ, ಆಪ್ತರು ಹಾಗೂ ಅಭಿಮಾನಿಗಳು ಬರುತ್ತಿದ್ದಾರೆ. ನೋವಿನ ಮಡುವಿನಲ್ಲಿರುವ ದರ್ಶನ್, ಕುಟುಂಬಸ್ಥರನ್ನು ಹೊರತು ಪಡಿಸಿ ಬೇರೆ ಯಾರೂ ನನ್ನ ಭೇಟಿಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೈಲಲ್ಲಿ ಬರುವವರನ್ನು ಭೇಟಿ ಮಾಡಲು ದರ್ಶನ್ ಗೆ ಮುಜುಗರವಾಗುತ್ತಿದೆ. ಹೀಗಾಗಿ ಕುಟುಂಬಸ್ಥರನ್ನು ಬಿಟ್ಟು ಬೇರೆ ಯಾರೂ ಬರುವುದು ಬೇಡ ಎಂದು ಮನವಿ ಮಾಡಿದ್ದಾರೆ. ನನ್ನ ನೋಡಲು ಜೈಲಿಗೆ ಯಾರೂ ಬರಬೇಡಿ. ಕುಟುಂಬ ಹೊರತುಪಡಿಸಿ, ಬೇರೆ ಯಾರೂ ಬರಬೇಡಿ. ಜೈಲಲ್ಲಿ ನನ್ನನ್ನು ನೋಡಿ, ನಿಮಗೂ ಬೇಸರವಾಗುತ್ತದೆ. ಭೇಟಿಗೆ ಬಂದ ನಿಮ್ಮನ್ನು ಜೈಲಿನಲ್ಲಿ ನೋಡಲು ನನಗೂ ನೋವಾಗುತ್ತದೆ. ಹೀಗಾಗಿ ಇನ್ನು ಮುಂದೆ ಕುಟುಂಬಕ್ಕೆ ಮಾತ್ರ ಭೇಟಿಯ ಅವಕಾಶ ನೀಡುತ್ತೇನೆ. ಅಭಿಮಾನಿಗಳು ಶಾಂತ ರೀತಿಯಿಂದ ಇರಿ ಎಂದು ನಟ ದರ್ಶನ್ ಮನವಿ ಮಾಡಿದ್ದಾರೆ.
ದರ್ಶನ್ ಈಗಾಗಲೇ ಜೈಲು ಸೇರಿ ಸುಮಾರು ಒಂದೂವರೆ ತಿಂಗಳು ಕಳೆದಿದೆ. ಆಪ್ತರು ಜೈಲಿಗೆ ಬಂದು ದರ್ಶನ್ ಭೇಟಿ ಮಾಡುತ್ತಿದ್ದಾರೆ. ಕುಟುಂಬದ ಹೊರತಾಗಿ ಯಾರನ್ನೂ ಭೇಟಿ ಮಾಡಲು ದರ್ಶನ್ ಒಪ್ಪುತ್ತಿಲ್ಲ. ಆಪ್ತರು ಜೈಲಿಗೆ ಬರುವುದರಿಂದ ಮುಜುಗರವಾಗುತ್ತಿದೆ. ಹೀಗಾಗಿ ಯಾರೂ ಬರಬೇಡಿ ಎಂದು ಹಾಸ್ಯ ನಟ ಸಾಧು ಕೋಕಿಲಾ ಭೇಟಿ ಸಂದರ್ಭದಲ್ಲಿ ದರ್ಶನ್ ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಪತ್ನಿ ವಿಜಯಲಕ್ಷ್ಮೀ ಪತಿಯನ್ನು ಹೇಗಾದರೂ ಮಾಡಿ ತೊಂದರೆಯಿಂದ ಮುಕ್ತ ಮಾಡಬೇಕೆಂದು ದೇವರ ಮೊರೆ ಹೋಗಿದ್ದಾರೆ. ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಹೋಮ ಕೈಗೊಂಡು ಭಾಗವಹಿಸಿದ್ದಾರೆ.