ತುಮಕೂರು: ಸಮೀಪದ ಬೆಳಗುಂಬದಲ್ಲಿ ಸೋಮವಾರ ಶಾಲಾ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ತುಮಕೂರು ಹೊರವಲಯದ ಬೆಳಗುಂಬ ಗ್ರಾಮದ ಬಳಿಯಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ, ವಾಕ್ ಶ್ರವಣ ದೋಷ ಮಕ್ಕಳ ವಸತಿ ಶಾಲೆ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಬೆಟ್ಟಕ್ಕೆ ಹೊಂದಿಕೊಂಡತೆ ಇರುವ ವಸತಿ ಶಾಲೆ ಬಳಿ ಮಕ್ಕಳು ಹಾಗೂ ಸಿಬ್ಬಂದಿಗಳು ಚಿರತೆಯನ್ನು ನೋಡಿ ಬೆಚ್ಚಿ ಬಿದ್ದಿದ್ದರು.
ಆ ಬಳಿಕ ಸ್ಥಳಕ್ಕೆ ಎಸಿಎಫ್ ಪವಿತ್ರಾ ಹಾಗೂ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯಾಧಿಕಾರಿಗಳು ಶಾಲೆಯಿಂದ 200 ಮೀಟರ್ ದೂರದಲ್ಲಿ ಬೋನ್ ಇಟ್ಟಿದ್ದರು. ನಿನ್ನೆ ರಾತ್ರಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಚಿರತೆ ಸೆರೆಯಾಗಿರುವುದರಿಂದ ಶಾಲಾ ಮಕ್ಕಳು ಮತ್ತು ಸಿಬ್ಬಂದಿಗಳು ನಿಟ್ಟುಸಿರುಬಿಟ್ಟಿದ್ದಾರೆ.