ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ಕರ್ನಾಟಕ ಭಯೋತ್ಪಾದಕರು ಮತ್ತು ಸಮಾಜಘಾತುಕ ಶಕ್ತಿಗಳ ಸುರಕ್ಷಿತ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ಮೈಸೂರು ಸಮೀಪ ಬೃಹತ್ ಡ್ರಗ್ಸ್ ಕಾರ್ಖಾನೆ ಪತ್ತೆ ಮತ್ತು ಬೆಂಗಳೂರಿನಲ್ಲಿ ಅಲ್-ಖೈದಾ ನಂಟು ಹೊಂದಿರುವ ಆರೋಪದಲ್ಲಿ ಮಹಿಳೆಯೊಬ್ಬರ ಬಂಧನವಾಗಿರುವ ಕುರಿತು ಹೇಳಿಕೆ ನೀಡಿರುವ ಸಂಸದರು, ಇಂತಹ ಘಟನೆಗಳು ರಾಜ್ಯದ ಆಂತರಿಕ ಭದ್ರತೆಯ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಸಿಎಂ ತವರು ಜಿಲ್ಲೆ ಮೈಸೂರಿನಲ್ಲೇ ಮೆಫೆಡೋನ್ (ಎಂಡಿ) ತಯಾರಿಸಿ ಸರಬರಾಜು ಮಾಡುತ್ತಿರುವ ಬೃಹತ್ ಡ್ರಗ್ಸ್ ಕಾರ್ಖಾನೆಯನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದರೆ, ರಾಜ್ಯದ ಗೃಹ ಹಾಗೂ ಗುಪ್ತಚರ ಇಲಾಖೆ ಎಷ್ಟರ ಮಟ್ಟಿಗೆ ನಿಷ್ಕ್ರಿಯವಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಎಂದು ತಿಳಿಸಿದ್ದಾರೆ.
ಸುಮಾರು 381 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಮುಂಬೈನ ಸಕಿನಾಕಾ ಪೊಲೀಸ್ ಠಾಣೆಯ ಆಂಟಿ-ನಾರ್ಕೋಟಿಕ್ಸ್ ಸೆಲ್ ಇದು ಕರ್ನಾಟಕದ ಇತಿಹಾಸದಲ್ಲಿಯೇ ಅತಿದೊಡ್ಡ ಮಾದಕ ವಸ್ತು ವಶ ಪ್ರಕರಣ ಎನ್ನಲಾಗುತ್ತಿದೆ. ಹೀಗಿರುವಾಗ ಕರ್ನಾಟಕದ ಗುಪ್ತಚರ ಇಲಾಖೆಗೆ ಇದರ ಬಗ್ಗೆ ಸುಳಿವೇ ಇರಲಿಲ್ಲ ಎಂಬುದು ನಿಜಕ್ಕೂ ಆತಂಕಕಾರಿ ವಿಚಾರ. ಇದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ಗುಪ್ತಚರ ವಿಭಾಗಗಳು ಸಂಪೂರ್ಣವಾಗಿ ಹಳ್ಳ ತಪ್ಪಿರುವುದಕ್ಕೆ ಮತ್ತೊಂದು ಉದಾಹರಣೆ ಎಂದು ಸಂಸದರು ಆರೋಪಿಸಿದ್ದಾರೆ.