ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಯುವ ಷಟ್ಲರ್ ಲಕ್ಷ್ಯ ಸೇನ್ ಸೆಮಿಫೈನಲ್ ಪ್ರವೇಶಿಸಿ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ.
ಲಕ್ಷ್ಯ ಸೇನ್, ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಈ ಮೂಲಕ ಒಲಿಂಪಿಕ್ ಇತಿಹಾಸದಲ್ಲಿ ಸೆಮಿಫೈನಲ್ ತಲುಪಿದ ಭಾರತದ ಮೊದಲ ಪುರುಷ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ತಿಯೆನ್ ಚೆನ್ ಅವರನ್ನು 19-21, 21-15, 21-12 ರಿಂದ ಸೋಲಿಸಿ ಸೆಮಿ-ಫೈನಲ್ ಪ್ರವೇಶಿಸಿದ್ದಾರೆ. ಲಕ್ಷ್ಯ ಸೇನ್ ಮುಂದೆ ಪದಕಕ್ಕೆ ಕೇವಲ ಒಂದು ಗೆಲುವಿನ ಅಂತರವಿದೆ. ಲಕ್ಷ್ಯಕ್ಕೂ ಮುನ್ನ ಕಿಡಂಬಿ ಶ್ರೀಕಾಂತ್ (2016) ಮತ್ತು ಪರುಪಳ್ಳಿ ಕಶ್ಯಪ್ (2012) ಕ್ವಾರ್ಟರ್ ಫೈನಲ್ ತಲುಪಿದ್ದರು. ಆದರೆ ಕ್ವಾರ್ಟರ್ ಫೈನಲ್ ಮೀರಿ ಈ ಇಬ್ಬರು ಆಟಗಾರರಿಗೆ ಮುನ್ನಡೆಯಲು ಸಾಧ್ಯವಾಗಿರಲಿಲ್ಲ.
ಈ ಪಂದ್ಯ ತೀವ್ರ ಜಿದ್ದಾಜಿದ್ದಿಯಿಂದ ಕೂಡಿ ಬಂದಿತ್ತು. ಇಬ್ಬರು ಶಟ್ಲರ್ಗಳು ತಲಾ ಒಂದೊಂದು ಅಂಕ ಗಳಿಸಲು ಪರದಾಡುತ್ತಿರುವುದು ಕಂಡು ಬಂತು. ಮೊದಲ ಸೆಟ್‌ನಲ್ಲಿ ಚೈನೀಸ್ ತೈಪೆಯ ಚೌ ತಿಯೆನ್ ಚೆನ್ ಪ್ರಾಬಲ್ಯ ಸಾಧಿಸಿ 21-19 ರಿಂದ ಮೊದಲ ಸೆಟ್ ಗೆದ್ದರು. ನಂತರ ಎರಡನೇ ಸೆಟ್‌ನಲ್ಲಿ ಪುನರಾಗಮನ ಮಾಡಿದ ಲಕ್ಷ್ಯ 21-15 ರಲ್ಲಿ ಗೆದ್ದು ಪಂದ್ಯವನ್ನು ಸಮಬಲಗೊಳಿಸಿದರು. ಹೀಗಾಗಿ ಮೂರನೇ ಸೆಟ್ ತೀವ್ರ ರೋಚಕತೆ ಸೃಷ್ಟಿಸಿತ್ತು. ಅಂತಿಮವಾಗಿ ಲಕ್ಷ್ಯ 21-12 ರಿಂದ ಮೂರನೇ ಸೆಟ್ ಗೆದ್ದು ಇತಿಹಾಸ ಬರೆದರು.
ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಲಕ್ಷ್ಯ ಸೇನ್, ಭಾರತದವರೇ ಆದ ಎಚ್ ಎಸ್ ಪ್ರಣಯ್ ರನ್ನು ಸೋಲಿಸಿದ್ದರು. ಆಗಸ್ಟ್ 1 ರಂದು ನಡೆದ ಬ್ಯಾಡ್ಮಿಂಟನ್ ಇವೆಂಟ್ ನಲ್ಲಿ ಭಾರತದ ಪರ ಪದಕದ ಭರವಸೆ ಮೂಡಿಸಿದ್ದ ಪಿವಿ ಸಿಂಧು ಸತತ ಮೂರನೇ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿಯೇ ಸಿಂಧು ಸೋಲು ಎದುರಿಸಬೇಕಾಯಿತು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಕೂಡ ಸೋಲನ್ನು ಎದುರಿಸಬೇಕಾಯಿತು. ಈಗ ಭಾರತಕ್ಕೆ ಲಕ್ಷ್ಯ ಪದಕದ ಭರವಸೆ ಮೂಡಿಸಿದ್ದಾರೆ.