ಹೈದರಾಬಾದ್: 20 ಜನರನ್ನು ಆಹುತಿ ಪಡೆದ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ವೇಮುರಿ ಕಾವೇರಿ ಟ್ರಾವೆಲ್ಸ್ ಬರೋಬ್ಬರಿ 16 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿತ್ತು ಎಂಬ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ತೆಲಂಗಾಣದಲ್ಲಿ ಈ ಬಸ್ 23,120 ರೂ. ದಂಡ ಪಾವತಿಸಲೂ ಬಾಕಿಯಿತ್ತು ಎಂದೂ ಹೇಳಲಾಗಿದೆ.
2024ರ ಜನವರಿ 27ರಿಂದ 2025ರ ಅಕ್ಟೋಬರ್ 9ರವರೆಗೆ ಒಟ್ಟು 16 ಬಾರಿ ಕಾವೇರಿ ಟ್ರಾವೆಲ್ಸ್ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಈ ಪೈಕಿ ನೋ ಎಂಟ್ರಿ ವಲಯವನ್ನು ಪ್ರವೇಶಿಸಿರುವ 9 ಪ್ರಕರಣಗಳಿದ್ದರೆ, ಉಳಿದವುಗಳು ಅತಿಯಾದ ವೇಗ ಹಾಗೂ ಅಪಾಯಕಾರಿ ಚಾಲನೆಗೆ ಸಂಬಂಧಿಸಿದ್ದು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಆಂಧ್ರಪ್ರದೇಶ ಸಾರಿಗೆ ಇಲಾಖೆ, DD01 N9490 ನೋಂದಣಿ ಸಂಖ್ಯೆಯ ಈ ಬಸ್ ಸುಸ್ಥಿತಿಯಲ್ಲಿತ್ತು ಎಂದು ಹೇಳಿದೆ. “ಕಾವೇರಿ ಟ್ರಾವೆಲ್ಸ್ ಹೆಸರಿನ ಈ ಬಸ್ಸನ್ನು 2018ರ ಮೇ 2ರಂದು ದಮನ್ ಮತ್ತು ದಿಯುನಲ್ಲಿ ನೋಂದಾಯಿಸಲಾಗಿತ್ತು. 2030ರ ಏಪ್ರಿಲ್ 30ರವರೆಗೆ ಪ್ರವಾಸಿ ಪರವಾನಗಿ, 2027ರ ಮಾರ್ಚ್ 31ರವರೆಗೆ ಫಿಟ್‌ನೆಸ್ ಪ್ರಮಾಣಪತ್ರ ಮತ್ತು 2026ರ ಏಪ್ರಿಲ್ 20ರವರೆಗೆ ವಿಮೆಯನ್ನು ಹೊಂದಿದೆ. ಎಲ್ಲಾ ಆಯಾಮಗಳಿಂದ ಸಮಗ್ರ ತನಿಖೆ ನಡೆಯುತ್ತಿದ್ದು, ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದೆ. ಸಾರಿಗೆ ಇಲಾಖೆಯು ಬಸ್‌ನ ದಾಖಲೆಗಳು ಸರಿಯಾಗಿವೆ ಎಂದು ಹೇಳುತ್ತಿದ್ದರೂ, 16 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ, 20 ಸಾವಿರ ರೂ.ಗೂ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿದ್ದ ಬಸ್ ಯಾವುದೇ ಅಡೆತಡೆಯಿಲ್ಲದೆ ಅಂತಾರಾಜ್ಯ ಸಂಚಾರ ನಡೆಸುತ್ತಿದ್ದುದು ಹೇಗೆ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.


















