ತಿರುವನಂತಪುರಂ : ಕೇರಳದಲ್ಲಿ ಪೊಲೀಸ್ ಭದ್ರತೆಯೊಂದಿಗೆ ತಮ್ಮ ಪ್ರಿಯಕರನನ್ನು ವಿವಾಹವಾಗಿರುವ 2025ರ ‘ಮಹಾ ಕುಂಭಮೇಳ’ದ ವೈರಲ್ ಬೆಡಗಿ ಮೊನಾಲಿಸಾ ಭೋಸ್ಲೆ ಅವರ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮೊನಾಲಿಸಾ ಅಪ್ರಾಪ್ತೆ, ಹೀಗಾಗಿ ಇದೊಂದು ಬಾಲ್ಯವಿವಾಹ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (VHP) ಮುಖಂಡರೊಬ್ಬರು ನೀಡಿದ್ದ ದೂರು ಅವರಿಗೇ ಉಲ್ಟಾ ಹೊಡೆದಿದೆ. ಅಧಿಕೃತ ದಾಖಲೆಗಳ ಪ್ರಕಾರ ಆಕೆ ವಯಸ್ಕಳಾಗಿದ್ದು, ವಿವಾಹವು ಸಂಪೂರ್ಣ ಕಾನೂನುಬದ್ಧವಾಗಿದೆ ಎಂಬುದು ಇದೀಗ ಸಾಬೀತಾಗಿದ್ದು, ವಿಹಿಂಪಕ್ಕೆ ತೀವ್ರ ಮುಖಭಂಗವಾಗಿದೆ.
ವಿಎಚ್‌ಪಿ ಮುಖಂಡನ ದೂರಿನಲ್ಲಿ ಏನಿತ್ತು?
ಮಧ್ಯಪ್ರದೇಶ ಮೂಲದ ಮೊನಾಲಿಸಾ ಮತ್ತು ಮಹಾರಾಷ್ಟ್ರ ಮೂಲದ ನಟ ಫರ್ಮಾನ್ ಖಾನ್ ಅವರ ಅಂತರ್‌ಧರ್ಮೀಯ ವಿವಾಹವು ಬುಧವಾರ ತಿರುವನಂತಪುರಂನ ಅರುಮನೂರ್ ದೇವಸ್ಥಾನದಲ್ಲಿ ನಡೆದಿತ್ತು. ಈ ವಿವಾಹದ ಬೆನ್ನಲ್ಲೇ ವಿಎಚ್‌ಪಿ ಮುಖಂಡರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ವಧು ಮೊನಾಲಿಸಾ ಇನ್ನೂ ಅಪ್ರಾಪ್ತೆಯಾಗಿದ್ದು, ಇದು ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ (POCSO) ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ಆದ್ದರಿಂದ ವಿವಾಹದಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದರು.
ದಾಖಲೆಗಳಿಂದ ಬಯಲಾಯ್ತು ಸತ್ಯ
ವಿಎಚ್‌ಪಿ ಮುಖಂಡನ ಈ ಗಂಭೀರ ಆರೋಪವು ಕೇವಲ ಊಹಾಪೋಹ ಎಂಬುದು ಸದ್ಯ ದೃಢಪಟ್ಟಿದೆ. ಕೇರಳದ ಸ್ಥಳೀಯಾಡಳಿತ ಇಲಾಖೆಯ ‘ಕೆ-ಸ್ಮಾರ್ಟ್’ (K-SMART) ವ್ಯವಸ್ಥೆಯ ದಾಖಲೆಗಳನ್ನು ಪರಿಶೀಲಿಸಿದಾಗ, ಮೊನಾಲಿಸಾ ಅವರಿಗೆ 18 ವರ್ಷ ದಾಟಿದ್ದು, ಅವರು ಕಾನೂನುಬದ್ಧವಾಗಿ ವಯಸ್ಕರು ಎಂಬುದು ಅಧಿಕೃತವಾಗಿ ಸಾಬೀತಾಗಿದೆ. ಭಾರತೀಯ ಕಾನೂನಿನ ಪ್ರಕಾರ ಆಕೆಗೆ ತನ್ನಿಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಹಕ್ಕಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಾಲ್ಯವಿವಾಹದ ಆರೋಪವು ಸಂಪೂರ್ಣವಾಗಿ ಹುಸಿಯಾಗಿದ್ದು, ಮದುವೆಗೆ ತಡೆವೊಡ್ಡುವ ಯತ್ನ ವಿಫಲವಾಗಿದೆ.
‘ದಿ ರಿಯಲ್ ಕೇರಳ ಸ್ಟೋರಿ’ ಎಂದಿದ್ದ ಸಚಿವರು
ಮಧ್ಯಪ್ರದೇಶದ ಇಂದೋರ್ ಮೂಲದವರಾದ ಮೊನಾಲಿಸಾ, 2025ರ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದಾಗ ತಮ್ಮ ಆಕರ್ಷಕ ಕಣ್ಣುಗಳಿಂದಾಗಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದರು. ಆ ಬಳಿಕ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಫರ್ಮಾನ್ ಖಾನ್ ಜೊತೆ ಆರು ತಿಂಗಳಿನಿಂದ ಪ್ರೀತಿಯಲ್ಲಿದ್ದರು. ಆದರೆ ಈ ಅಂತರ್‌ಧರ್ಮೀಯ ವಿವಾಹಕ್ಕೆ ಆಕೆಯ ತಂದೆಯ ತೀವ್ರ ವಿರೋಧವಿತ್ತು. ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಕೇರಳದ ಪೂವಾರ್‌ಗೆ ಬಂದಿದ್ದ ಮೊನಾಲಿಸಾ, ತಂದೆಯ ಒತ್ತಾಯದಿಂದ ಪಾರಾಗಲು ಅಲ್ಲಿನ ಪೊಲೀಸ್ ಠಾಣೆಯ ಮೆಟ್ಟಿಲೇರಿ ರಕ್ಷಣೆ ಕೋರಿದ್ದರು. ಪೊಲೀಸರು ಆಕೆಯ ತಂದೆಯ ಮನವೊಲಿಸಿ ವಾಪಸ್ ಕಳುಹಿಸಿದ ಬಳಿಕ, ದೇವಸ್ಥಾನದಲ್ಲಿ ಮದುವೆ ನೆರವೇರಿತ್ತು.
ವಿಶೇಷವೆಂದರೆ, ಈ ವಿವಾಹ ಸಮಾರಂಭದಲ್ಲಿ ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹಲವು ಪ್ರಮುಖ ರಾಜಕೀಯ ನಾಯಕರು ಭಾಗವಹಿಸಿದ್ದರು. ಸಚಿವ ಶಿವನ್‌ಕುಟ್ಟಿ ಅವರು ಈ ಮದುವೆಯನ್ನು ‘ಇದೇ ಅಸಲಿ ಕೇರಳ ಸ್ಟೋರಿ (The Real Kerala Story)’ ಎಂದು ಬಣ್ಣಿಸಿದ್ದರು.
ಇದನ್ನೂ ಓದಿ : ಕಬ್ಬಿಣದ ಸ್ಟ್ಯಾಂಡ್ ಹಿಡಿದು ಹೋಗುತ್ತಿದ್ದವರಿಗೆ ವಿದ್ಯುತ್ ಶಾಕ್.. ಇಬ್ಬರು ದುರ್ಮರಣ!



















