ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುತ್ತಿರುವ ಕೆ.ಎಲ್ ರಾಹುಲ್‌ಗೆ ಆಡುವ ಅವಕಾಶ ಸಿಗುವುದು ಕಡಿಮೆ. ಅವರು ಬದಲಿ ಆಟಗಾರನಾಗಿ ಆಡಬೇಕಾಗಿ ಬರುತ್ತದೆ. ಅವರನ್ನು ಪೂರ್ಣ ಪ್ರಮಾಣದಲ್ಲಿ ಆಡಿಸಲು ಅನೇಕ ಅಡಚಣೆಗಳಿವೆ. ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್ ಸೇರಿದಂತೆ ದೊಡ್ಡ ಪೈಪೋಟಿ ಇರುವ ಕಾರಣ ಅಲ್ಲಿಯೂ ಸಾಧ್ಯವಾಗುತ್ತಿಲ್ಲ. ಬ್ಯಾಟಿಂಗ್ ಆರ್ಡರ್ ಕೂಡ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಕ್ರಮಾಂಕ ನೀಡಲು ಆಗುತ್ತಿಲ್ಲ. ಆದರೆ, ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ ಅವರು ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ಆಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಕದಿನ ಕ್ರಿಕೆಟ್ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಹೊಣೆಯನ್ನು ಕೆ.ಎಲ್. ರಾಹುಲ್ ಅವರಿಗೆ ವಹಿಸುವುದು ಸೂಕ್ತ. 2023ರ ವಿಶ್ವಕಪ್ ಟೂರ್ನಿಯಲ್ಲಿ ಅವರು ಕೀಪಿಂಗ್ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
‘ರಿಷಭ್ ಪಂತ್ ಅವರು ನಿಸ್ಸಂದೇಹವಾಗಿ ಅದ್ಭುತ ಪ್ರತಿಭಾವಂತ ಆಟಗಾರ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಗೆ ವಿಕೆಟ್ ಕೀಪಿಂಗ್ ಹೊಣೆಗಾರಿಕೆ ಕೊಡುವುದು ಉತ್ತಮ. ಅಲ್ಲದೇ ಅವರು ಮಧ್ಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಬಲ್ಲರು ಎಂಬುದನ್ನು ಇಲ್ಲಿ ಪರಿಗಣಿಸಬೇಕು’ ಎಂದು ಸ್ಟಾರ್ ಸ್ಪೋರ್ಟ್ಸ್ ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಸಂಜಯ್ ಹೇಳಿದರು.
ಬುಮ್ರಾ ಅಲಭ್ಯತೆ ಕಾಳಜಿ
‘ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ಉಳಿದ ವೇಗದ ಬೌಲರ್‌ಗಳ ಮೇಲಿನ ಹೊಣೆ ಹೆಚ್ಚುತ್ತದೆ. ಅವರೆಲ್ಲರೂ ಆ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಬೇಕಾಗುತ್ತದೆ. ಮಧ್ಯದ ಓವರ್‌ಗಳಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಪರಿಣಾಕಾರಿಯಾಗಿದ್ದರೆ. ವರುಣ್ ಚಕ್ರವರ್ತಿ ಕೂಡ ಪ್ರಭಾವ ಬೀರಬಲ್ಲರು. ಏನಾದರೂ ಬೂಮ್ರಾ ಅವರ ಸ್ಥಾನವನ್ನು ತುಂಬುವುದು ಯಾರಿಗೂ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಏಕದಿನ ಕ್ರಿಕೆಟ್‌ನಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ನನಗೆ ತುಸು ಅಚ್ಚರಿಯೆನಿಸಿತು’ ಎಂದೂ ಹೇಳಿದರು. ಮೊಹಮ್ಮದ್ ಸಿರಾಜ್ ಮಾರಕ ಬೌಲರ್. ಅವರು ಎದುರಾಳಿ ತಂಡದ ಮೇಲೆ ಆಕ್ರಮಣ ಮಾಡಬಲ್ಲವರು. ಅತ್ಯುತ್ತಮ ಲೈನ್ ಮತ್ತು ಲೆಂತ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಏಕ ದಿನ ಮಾದರಿಗಳಿಗೆ ಅವರ ಅಗತ್ಯ ಸಾಕಷ್ಟಿದೆ. ಆದಾಗ್ಯೂ ಆಯ್ಕೆಗಾರರು ಅವರನ್ನು ಹೊರಗಿಟ್ಟಿರುವುದು ಅಚ್ಚರಿಯ ವಿಷಯ ಎಂದು ಬಂಗಾರ್ ಹೇಳಿದ್ದಾರೆ.