ಬೆಂಗಳೂರು : ರಾಜ್ಯ ಕಾಂಗ್ರೆಸ್ ಣದಾಟಕ್ಕೆ ಬ್ರೇಕ್ಫಾಸ್ಟ್ ಮೂಲಕ ಇಂದು ಬ್ರೇಕ್ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಜೊತೆಗೆ ಕುಳಿತು ಉಪಾಹಾರ ಸೇವಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಈ ಬೆನ್ನಲ್ಲೇ ಡೆಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ.
ಇಂದಿನ ಸಭೆಯಲ್ಲಿ ರಾಜ್ಯದ ಬ್ರೇಕ್ ಪಾಸ್ಟ್ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ ಈವರೆಗೂ ನಡೆದ ಬೆಳವಣಿಗೆ ಬಗ್ಗೆ ಖರ್ಗೆ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿದರು. ಮುಖ್ಯವಾಗಿ ಸಿಎಂ ಬದಲಾವಣೆ ಬಗ್ಗೆಯೂ ಚರ್ಚೆಗೆ ಆಗಿದ್ದು, ಸಾಧಕ-ಬಾಧಕಗಳ ಬಗ್ಗೆ ವಿಮರ್ಶೆ ನಡೆದಿದೆ ಎನ್ನಲಾಗಿದೆ.
ನಾಳೆ ಸಂಜೆ ಐದು ಗಂಟೆಗೆ ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ ಜೊತೆಗೆ ಚರ್ಚೆ ಬಳಿಕ ಅಂತಿಮ ತೀರ್ಮಾನಕ್ಕೆ ಬರುವ ನಿರ್ಧಾರ ಮಾಡಲಾಗಿದೆ. ಹೀಗಾಗಿ, ನಾಳೆ ಸೋನಿಯ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸಭೆ ನಿರ್ಣಾಯಕವಾಗಿದ್ದು, ಮುಖ್ಯಮಂತ್ರಿ ಹುದ್ದೆಯ ಭವಿಷ್ಯ ನಿರ್ಣಯಿಸಲಿದೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಸೃಷ್ಟಿಯಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಪರಸ್ಪರ ಮಾತುಕತೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ಸೂಚನೆ ನೀಡಿತ್ತು. ಅದರಂತೆ ಸಿಎಂ ಮತ್ತು ಡಿಸಿಎಂ ಇಂದು ಬೆಳಗ್ಗೆ ಉಪಾಹಾರ ಸಭೆ ನಡೆಸಿದರು. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಇಬ್ಬರೂ ತಿಳಿಸಿದ್ದಾರೆ.
ಇದನ್ನೂ ಓದಿ : ನಾಳೆ ಭಾರತ vs ಸೌತ್ ಆಫ್ರಿಕಾ ಮೊದಲ ಏಕದಿನ ಪಂದ್ಯ | ಎಷ್ಟು ಗಂಟೆಗೆ? ಲೈವ್ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ



















