ಬೆಳಗಾವಿ: ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅರ್ಹ ವ್ಯಕ್ತಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಲಾಡ್, ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ ಎಂದು ಖರ್ಗೆಯವರು ಬೇರೆಯವರಿಗೆ ಉದಾಹರಣೆ ನೀಡಲು ಹೇಳಿದ್ದಾರೆ. ಇಂತಹ ಅವಕಾಶ ತಪ್ಪಿದರೂ ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಅದನ್ನು ಯಾವ ರೀತಿಯಲ್ಲಿ ಬೇಕಾದರೂ ಅರ್ಥೈಸಿಕೊಳ್ಳಬಹುದು. ನನ್ನ ಪ್ರಕಾರ, ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎನ್ನುವ ರೀತಿಯಲ್ಲಿ ಖರ್ಗೆ ಸಾಹೇಬ್ರು ಹೇಳಿದ್ದೆಂದು ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ನನ್ನ ಪ್ರಕಾರ ಮಲ್ಲಿಕಾರ್ಜುನ ಖರ್ಗೆಯವರು ಅತ್ಯಂತ ಮೋಸ್ಟ್ ಎಲಿಜಿಬಲ್ ಪರ್ಸನ್. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಖರ್ಗೆ ಸಾಹೇಬ್ರು ನಡೆದುಕೊಂಡು ಬಂದಂತಹ ದಾರಿ, ಅವರು ಪಕ್ಷಕ್ಕೆ ತೋರಿರುವ ನಿಷ್ಠೆ, ಇಡೀ ಭಾರತ ದೇಶದಲ್ಲಿ ಅವರಂತಹ ಇನ್ನೋರ್ವ ವ್ಯಕ್ತಿ ಸಿಗಲಾರರು. 2004ರಲ್ಲಿ ಅವರ ಜೊತೆಗೆ ತಿರುಗಾಡುವ ಅವಕಾಶ ಸಿಕ್ಕಿತ್ತು, ಬೆಳಗಾವಿಯಲ್ಲಿ ಮೊದಲ ಬಾರಿಗೆ ಅಧಿವೇಶನ ನಡೆದಿತ್ತು. ರಾತ್ರಿ 10 ಗಂಟೆಯಾದರೂ ಅವರು ಸದನದಲ್ಲಿ ಇರುತ್ತಿದ್ದರು. ಸದನದಲ್ಲಿ ಸುಮ್ಮನೆ ಅವರು ಕಾಟಾಚಾರಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಮಹಾದಾಯಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿದ್ದರೂ ಮಹಾದಾಯಿ ನದಿ ವಿವಾದವನ್ನು ಪರಿಹರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಈಗ, ಟೆಂಡರ್‌ಗಳನ್ನು ನೀಡಲಾಗಿರುವುದರಿಂದ ಕೆಲಸ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ, ಯೋಜನೆ ಪ್ರಾರಂಭವಾಗಿದೆ ಎಂದು ಹೇಳಿಕೊಂಡು ಸಿಹಿತಿಂಡಿಗಳನ್ನು ವಿತರಿಸಿತು. ಈಗ ಯಾಕೆ ಯೋಜನೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಇದಕ್ಕೆ ಉತ್ತರಿಸಲಿ ಎಂದಿದ್ದಾರೆ.
ನಂತರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಲಾಡ್, 11 ವರ್ಷಗಳಿಂದ ಇಡೀ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ರಾಷ್ಟ್ರೀಯ ಮಾಧ್ಯಮಗಳ ಪ್ರೈಮ್ ಟೈಮಲ್ಲಿ ಏನು ಬರುತ್ತದೋ ಅದನ್ನೇ ನೋಡಿ ಸುಮ್ಮನಾಗುವುದು. ರಾಷ್ಟ್ರೀಯ ಮಾಧ್ಯಮದ ಕೆಲ ನಿರೂಪಕರು ಬಿಜೆಪಿ ವಕ್ತಾರರಂತೆ ಮಾತನಾಡುತ್ತಾರೆ. ಪಾರ್ಲಿಮೆಂಟ್ ಸೆಷನ್ ನಡೆದಿದೆ. ಇಂತಹ ಸಮಯದಲ್ಲಿ ಪ್ರಧಾನಿ ಅವರು ವಿದೇಶಕ್ಕೆ ಏಕೆ ಹೋಗಬೇಕಿತ್ತು. 90 ದೇಶ ಒಳಗೊಂಡಂತೆ 180 ಸಲ ಮೋದಿ ಅವರು ವಿದೇಶ ಪ್ರವಾಸ ಮಾಡಿದ್ದಾರೆ.
ಪಾರ್ಲಿಮೆಂಟ್ ಸೆಷನ್ ನಡೆಯಬೇಕಾದರೆ ವಿದೇಶ ಪ್ರವಾಸ ಯಾಕೆ ಮಾಡಬೇಕು? ಸದನದಲ್ಲಿ ಇದ್ದು ಉತ್ತರ ಕೊಡಬಾರದಾ? ಇದನ್ನು ಕೇಳುವ ಅವಕಾಶ ಇಲ್ಲವೇ? ಬಡವರಿಗೆ, ಕಟ್ಟ ಕಡೆಯ ವ್ಯಕ್ತಿಗೂ ಪ್ರಶ್ನಿಸುವ ಅಧಿಕಾರ ಇದೆ, ಆದರೆ ಅವರಿಗೆ ಕೇಳಬಾರದು. ಮೋದಿ ಸಾಹೇಬರನ್ನು ಯಾರೂ, ಏನೂ ಪ್ರಶ್ನಿಸಬಾರದು, ಬಿಜೆಪಿ ವಿರುದ್ಧ ಮಾತನಾಡಬಾರದು ಅಷ್ಟೇ ಎಂದು ಕಿಡಿಕಾರಿದ್ದಾರೆ.