ಕೇರಳದ ವಯನಾಡಿನಲ್ಲಿ ಉಂಟಾದ ಗುಡ್ಡ ಕುಸಿತದ ಪ್ರಕರಣದಲ್ಲಿ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 146ಕ್ಕೆ ಏರಿಕೆ ಕಂಡಿದೆ.
ವಯನಾಡಿನ ಕೋಳಿಕ್ಕೋಡ್ ನಲ್ಲಿ ಬರೋಬ್ಬರಿ 9 ಬಾರಿ ಭೂಕುಸಿತ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ನೂರಾರು ಜನ ಅವಶೇಷಗಳಡಿ ಸಿಲುಕಿರುವುದರಿಂದಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ನೂರಾರು ಜನ ಇನ್ನೂ ಅವಶೇಷಗಳಡಿ ಸಿಲುಕಿದ್ದಾರೆ. ಹೀಗಾಗಿ ಸಾವು-ನೋವುಗಳ ಭೀತಿಯನ್ನು ಹುಟ್ಟು ಹಾಕಿದೆ. ಸೇನೆ ಮತ್ತು ಎನ್ ಡಿಆರ್ ಎಫ್ ಸೇರಿದಂತೆ ರಕ್ಷಣಾ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.
ಭೂಕುಸಿತದಿಂದ ಹಲವು ಮನೆಗಳು, ಮರಗಳು, ಹಸು, ನಾಯಿಗಳು, ಜನರು ಸೇರಿದಂತೆ ಎಲ್ಲವೂ ಕೊಚ್ಚಿಕೊಂಡು ಹೋಗಿವೆ. ವಯನಾಡ್ ಮತ್ತು ಕೇರಳದ ಎಲ್ಲಾ ಉತ್ತರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಪತ್ತೆಯಾಗಿರುವ ಮೃತದೇಹಗಳ ಪೈಕಿ ಇಲ್ಲಿಯವರೆಗೆ 48 ಮೃತದೇಹಗಳನ್ನು ಗುರುತಿಸಲಾಗಿದೆ. ಪತ್ತೆಯಾದ 96 ಮೃತ ದೇಹಗಳ ಮರಣೋತ್ತರ ಪರೀಕ್ಷೆ ಕೂಡ ಪೂರ್ಣಗೊಂಡಿದೆ. 32 ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಕೇರಳ ರಾಜ್ಯಾದ್ಯಂತ 118 ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 5,531 ಜನ ಶಿಬಿರಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ಪೊಲೀಸ್ ಮುಂತಾದ ವಿವಿಧ ಪಡೆಗಳು ಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿವೆ. ಸೇನೆ ಮತ್ತು ನೌಕಾಪಡೆಯ ವಿವಿಧ ತುಕಡಿಗಳು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿ ರಕ್ಷಣಾ ಕಾರ್ಯ ನಡೆಸುತ್ತಿವೆ. ಈ ಘಟನೆಗೆ ಇಡೀ ದೇಶವೇ ಮಮ್ಮಲ ಮರುಗಿದೆ.