ಕೇರಳದ ವಯನಾಡಿನಲ್ಲಿ ಉಂಟಾದ ಭೂಕುಸಿತದಿಂದಾಗಿ ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಇಲ್ಲಿಯವರೆಗೆ ಘಟನೆಗೆ ಬಲಿಯಾದವರ ಸಂಖ್ಯೆ 300ರ ಗಡಿ ದಾಟಿದೆ. ಇನ್ನೂ ಸುಮಾರು 200ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಹಲವರನ್ನು ರಕ್ಷಿಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಮ್ಮದಿ ಕಳೆದುಕೊಂಡ ಕುಟುಂಬಸ್ಥರಿಗೆ ಆಸರೆಯಾಗಬೇಕೆಂಬ ನಿಟ್ಟಿನಲ್ಲಿ ಹಲವರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಈಗ ನಟ ಚಿರಂಜೀವಿ ಹಾಗೂ ಅವರ ಪುತ್ರ, ನಟ ರಾಮ್ ಚರಣ್ ಬರೋಬ್ಬರಿ 1 ಕೋಟಿ ರೂ. ಪರಿಹಾರ ನೀಡಿದ್ದಾರೆ.
ಚಿರಂಜೀವಿ ಹಾಗೂ ಅವರ ಕುಟುಂಬಸ್ಥರ ಮಾನವೀಯತೆಗೆ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಚಿರಂಜೀವಿ, ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಪಕೃತಿಯ ವಿಕೋಪಕ್ಕೆ ನೂರಾರು ಜನರು ಪ್ರಾಣ ಕಳೆದಕೊಂಡಿದ್ದಕ್ಕೆ ತೀವ್ರ ನೋವಾಗಿದೆ. ವಯನಾಡು ದುರಂತದ ಸಂತ್ರಸ್ತರಿಗಾಗಿ ನನ್ನ ಮನ ಮಿಡಿಯುತ್ತಿದೆ. ಚರಣ್ ಮತ್ತು ನಾನು ಜೊತೆಯಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರ ಬೆಂಬಲಕ್ಕೆ ನಿಲ್ಲುತ್ತೇವೆ. ನೋವಿನಲ್ಲಿ ಇರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಹಲವಾರು ಸೆಲೆಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ಭಾನುವಾರವಷ್ಟೇ ನಟ ಅಲ್ಲು ಅರ್ಜುನ್ 25 ಲಕ್ಷ ರೂಪಾಯಿ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂಪಾಯಿ ನೀಡಿದ್ದಾರೆ. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ಲಾಲ್ ಅವರು 3 ಕೋಟಿ ರೂಪಾಯಿ ನೀಡಲು ಮುಂದಾಗಿದ್ದಾರೆ. ಮಮ್ಮುಟ್ಟಿ ಮತ್ತು ದುಲ್ಖರ್ ಸಲ್ಮಾನ್ ಜೊತೆಯಾಗಿ 35 ಕೋಟಿ ರೂ. ಪರಿಹಾರ ನೀಡಿದ್ದಾರೆ. ಸೆಲೆಬ್ರಿಟಿಗಳ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಲು ತುಂಬಾ ಖುಷಿಯಾಗುತ್ತಿದ್ದಾರೆ.