ತಿರುವನಂತಪುರಂ: ಶಸ್ತ್ರಾಸ್ತ್ರ, ಸ್ಫೋಟಕ, ಚೂರಿ-ಚಾಕು, ಲೈಟರ್, ಪಟಾಕಿ ಮುಂತಾದ ವಸ್ತುಗಳನ್ನು ವಿಮಾನದಲ್ಲಿ ಕೊಂಡೊಯ್ಯುವುದಕ್ಕೆ ನಿಷೇಧವಿರುವ ಬಗ್ಗೆ ಕೇಳಿರುತ್ತೀರಿ. ಆದರೆ, ಮಲ್ಲಿಗೆ ಹೂವಿಗೂ ಇಂಥ ನಿಷೇಧವಿದೆ ಎಂಬುದು ನಿಮಗೆ ಗೊತ್ತಿತ್ತೇ?
ಹೌದು, ಆಸ್ಟ್ರೇಲಿಯಾದಲ್ಲಿ ಇಂಥದ್ದೊಂದು ನಿಯಮವಿದೆಯಂತೆ. ಈ ನಿಯಮದ ಬಗ್ಗೆ ಗೊತ್ತಿಲ್ಲದೇ ಆ ದೇಶಕ್ಕೆ ಪ್ರಯಾಣಿಸಿರುವ ಮಲಯಾಳಂನ ಖ್ಯಾತ ನಟಿ ನವ್ಯಾ ನಾಯರ್ ಕೊನೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ 1.14 ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ.
ವಿಕ್ಟೋರಿಯಾದ ಮಲಯಾಳಿ ಅಸೋಸಿಯೇಷನ್ ಆಯೋಜಿಸಿದ್ದ ಓಣಂ ಆಚರಣೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ತಾವು ಮುಡಿಯಲೆಂದು ಮಲ್ಲಿಗೆ ಹೂವನ್ನು ಅವರು ತಮ್ಮ ಕೈಚೀಲದಲ್ಲಿ ತೆಗೆದುಕೊಂಡು ಹೋಗಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವಾಗ ಹೂವಿರುವುದನ್ನು ನೋಡಿದ ಸಿಬ್ಬಂದಿ, ಅವರನ್ನು ತಡೆದು, ಇದಕ್ಕೆ ಇಲ್ಲಿ ನಿಷೇಧವಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಮಲ್ಲಿಗೆಯನ್ನು ತಂದಿದ್ದಕ್ಕೆ 1.14 ಲಕ್ಷ ರೂ.ದಂಡವನ್ನೂ ವಿಧಿಸಿದ್ದಾರೆ.
ದಂಡ ವಿಧಿಸಿದ್ದೇಕೆ?
ಕಾರ್ಯಕ್ರಮದಲ್ಲಿ ಮಾತನಾಡಿದ ನವ್ಯಾ ನಾಯರ್, “ನಾನು ಇಲ್ಲಿಗೆ ಬರುವ ಮೊದಲು, ನನ್ನ ತಂದೆ ನನಗೆ ಮಲ್ಲಿಗೆ ಹೂವನ್ನು ತಂದುಕೊಟ್ಟಿದ್ದರು. ಅದನ್ನು ಎರಡು ಭಾಗಗಳಾಗಿ ಮಾಡಿ, ಒಂದು ಭಾಗವನ್ನು ಕೊಚ್ಚಿಯಿಂದ ಸಿಂಗಾಪುರದವರೆಗೆ ಮುಡಿದುಕೊಂಡಿದ್ದೆ. ಇನ್ನೊಂದು ಭಾಗವನ್ನು ಸಿಂಗಾಪುರದಿಂದ ಮುಂದಿನ ಪ್ರಯಾಣಕ್ಕಾಗಿ ನನ್ನ ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ.

ಆದರೆ, ನಾನು ಮಾಡಿದ್ದು ಅಲ್ಲಿನ ಕಾನೂನಿಗೆ ವಿರುದ್ಧವಾಗಿತ್ತು. ತಿಳಿಯದೆ ಮಾಡಿದ ತಪ್ಪಾದರೂ, ತಿಳಿಯದಿರುವುದು ಕ್ಷಮೆಗೆ ಕಾರಣವಾಗುವುದಿಲ್ಲ. 15 ಸೆಂ.ಮೀ. ಉದ್ದದ ಮಲ್ಲಿಗೆ ಹೂವಿನ ಮಾಲೆ ತಂದಿದ್ದಕ್ಕಾಗಿ ಅಧಿಕಾರಿಗಳು ನನಗೆ 1,980 ಆಸ್ಟ್ರೇಲಿಯನ್ ಡಾಲರ್ (ಸುಮಾರು ₹1.14 ಲಕ್ಷ) ದಂಡ ವಿಧಿಸಿದರು. ಉದ್ದೇಶಪೂರ್ವಕವಲ್ಲದಿದ್ದರೂ ಅದು ತಪ್ಪೇ. 28 ದಿನಗಳೊಳಗೆ ದಂಡವನ್ನು ಪಾವತಿಸಬೇಕೆಂದು ಅವರು ಹೇಳಿದ್ದಾರೆ” ಎಂದು ಘಟನೆಯನ್ನು ವಿವರಿಸಿದ್ದಾರೆ.
ಆಸ್ಟ್ರೇಲಿಯಾದ ವಿಮಾನ ನಿಲ್ದಾಣದ ನಿಯಮಗಳೇನು?
ಆಸ್ಟ್ರೇಲಿಯಾ ತನ್ನ ಪರಿಸರವನ್ನು ರಕ್ಷಿಸಲು ಅತ್ಯಂತ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿದೆ. ಈ ನಿಯಮಗಳ ಪ್ರಕಾರ, ದೇಶದೊಳಗೆ ತರಬಹುದಾದ ಮತ್ತು ತರಬಾರದ ವಸ್ತುಗಳ ಬಗ್ಗೆ ಸ್ಪಷ್ಟ ಸೂಚನೆಗಳಿವೆ.
ಘೋಷಿಸಬೇಕಾದ ವಸ್ತುಗಳು:
ಪ್ರಯಾಣಿಕರು ಆಸ್ಟ್ರೇಲಿಯಾಗೆ ಬಂದಿಳಿದಾಗ ತಮ್ಮ “ಆಗಮನ ಕಾರ್ಡ್” (Incoming Passenger Arrival Card) ನಲ್ಲಿ ತಮ್ಮಲ್ಲಿ ಇರುವಂತಹ ಎಲ್ಲಾ ಆಹಾರ, ಸಸ್ಯಜನ್ಯ ವಸ್ತುಗಳು, ಮತ್ತು ಪ್ರಾಣಿ ಉತ್ಪನ್ನಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.
ನಿಷೇಧಿತ ವಸ್ತುಗಳು:
ತಾಜಾ ಹಣ್ಣು-ತರಕಾರಿಗಳು, ಮಾಂಸ, ಕೋಳಿ, ಹಂದಿಮಾಂಸ, ಮೊಟ್ಟೆ, ಡೈರಿ ಉತ್ಪನ್ನಗಳು, ಮತ್ತು ಜೀವಂತ ಸಸ್ಯಗಳು ಅಥವಾ ಬೀಜಗಳನ್ನು ಆಸ್ಟ್ರೇಲಿಯಾಗೆ ತರುವಂತಿಲ್ಲ. ಈ ವಸ್ತುಗಳು ಆಸ್ಟ್ರೇಲಿಯಾದ ವಿಶಿಷ್ಟ ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದಾದ ಗಂಭೀರ ಕೀಟಗಳು ಮತ್ತು ರೋಗಗಳನ್ನು ಪರಿಚಯಿಸಬಹುದು. ನವ್ಯಾ ನಾಯರ್ ತಂದ ಹೂವು ‘ಸಸ್ಯಜನ್ಯ ವಸ್ತು’ ವರ್ಗಕ್ಕೆ ಸೇರಿದ್ದರಿಂದ, ಅದನ್ನು ಘೋಷಿಸದೇ ತಂದಿದ್ದು ಕಾನೂನಿನ ಉಲ್ಲಂಘನೆಯಾಗಿದೆ.
ನಿಯಮ ಉಲ್ಲಂಘಿಸಿದರೆ ಏನಾಗುತ್ತದೆ?
ವಸ್ತುಗಳನ್ನು ಘೋಷಿಸದಿದ್ದರೆ ಅಥವಾ ತಪ್ಪು ಮಾಹಿತಿ ನೀಡಿದರೆ ಕಠಿಣ ದಂಡ ವಿಧಿಸಲಾಗುತ್ತದೆ. ಜತೆಗೆ, ಬೇರೆ ರೀತಿಯ ಕ್ರಮಗಳನ್ನೂ ಕೈಗೊಳ್ಳಬಹುದಾಗಿದೆ.
- 5,500 ಆಸ್ಟ್ರೇಲಿಯನ್ ಡಾಲರ್ ವರೆಗೆ ದಂಡ
- ವೀಸಾ ರದ್ದುಗೊಳಿಸುವಿಕೆ
- ದೇಶಕ್ಕೆ ಪ್ರವೇಶ ನಿರಾಕರಣೆ
- ದೇಶದಿಂದ ಹೊರಡುವವರೆಗೆ ವಲಸೆ ಬಂಧನದಲ್ಲಿಡುವುದು