ಬೆಂಗಳೂರು- ಸಾಹಸಸಿಂಹ ಅಭಿನವ ಭಾರ್ಗವ, ಕರುನಾಡ ಕರ್ಣ, ಡಾ.ವಿಷ್ಣುವರ್ಧನ್ ಗೆ ಕೊನೆಗೂ ಕರ್ನಾಟಕರತ್ನ ಲಭಿಸಿದೆ. 15 ವರ್ಷಗಳು ವಿಷ್ಣು ಅಭಿಮಾನಿಗಳ ಸತತ ಪ್ರಯತ್ನ ಹೋರಾಟವೇ ಈ ಜೀವಮಾನ ಪ್ರಶಸ್ತಿಗೆ ರಹದಾರಿ. ಕಾಡಿ ಬೇಡಿದ ನಂತರವೇ ವಿಷ್ಣುವರ್ಧನ್ ಮರಣೋತ್ತರ ಕರ್ನಾಟಕ ರತ್ನ ಭಾಜನರಾಗಿದ್ದಾರೆ. ಎಂದೋ ಕೊಡಬೇಕಾಗಿದ್ದು ಇಂದು ಕೊಟ್ಟಿದ್ದಾರೆ ಎನ್ನುವ ಸಮಾಧಾನ ವಿಷ್ಣು ಅಭಿಮಾನಿಗಳ ಪಾಲಾಗಿದೆ. ವಿಷ್ಣುವರ್ಧನ್ ಸಿನಿಮಾ ಸೇವೆ ಎಲ್ಲಾ ಪ್ರಶಸ್ತಿಗಳಿಗಿಂತ ಶ್ರೇಷ್ಠವಾದದ್ದು ಎಂಬುದನ್ನು ಮರೆಯುವಂತಿಲ್ಲ. ರಾಜ್ಯ ಸರ್ಕಾರ ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿಗೆ ಕರ್ನಾಟಕರತ್ನ ಪ್ರಶಸ್ತಿ ಘೋಷಿಸುತ್ತಿದ್ದಂತೆ ಚಿತ್ರರಂಗದ ಇನ್ನಷ್ಟು ಸಾಧಕರಿಗೂ ಮತ್ತು ಮೇರುನಟರಿಗೂ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು ಎನ್ನುವ ಕೂಗು ಜೋರಾಗಿದೆ.
ಈ ಹಿಂದೆ ಬೊಮ್ಮಾಯಿ ಸರ್ಕಾರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗಿತ್ತು. ಸಿನಿಮಾ ಮತ್ತು ಸಮಾಜಸೇವೆಯನ್ನ ಇಲ್ಲಿ ಪರಿಗಣಿಸಲಾಗಿತ್ತು. ಡಾ.ರಾಜ್ ಕುಮಾರ್ ಗೆ ಕರ್ನಾಟಕರತ್ನ ಪ್ರಶಸ್ತಿ ನೀಡಿದ್ದು ಚಿತ್ರರಂಗಕ್ಕೆ ಕಳಶಪ್ರಾಯವಾಗಿತ್ತು. ಇದೀಗ ಬೇರೆ ಕಲಾವಿದರಿಗೂ ಕರ್ನಾಟಕರತ್ನ ಪ್ರಶಸ್ತಿ ನೀಡಬೇಕು ಎನ್ನುವ ಒತ್ತಾಯ ಹಲವು ಗೊಂದಲಗಳಿಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕ ರತ್ನ ಪ್ರಶಸ್ತಿಯ ನಿಜವಾದ ಮಾನದಂಡಗಳು ಏನು ಪ್ರಶ್ನೆ ಸಿನಿಮಾವಲಯದಲ್ಲಿ ಹೊಗೆಯಾಡುತ್ತಿದೆ.
ಅಂಬರೀಷ್, ಶಂಕರ್ ನಾಗ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಜ್ರಮುನಿ, ಟೈಗರ್ ಪ್ರಭಾಕರ್, ದ್ವಾರಕೀಶ್, ನರಸಿಂಹರಾಜು, ಬಾಲಣ್ಣ,ಲೀಲಾವತಿ ಸೇರಿದಂತೆ ಹಲವು ದಿಗ್ಗಜರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕಲಾಸೇವೆ ಚಂದನವನದ ಶಾಶ್ವತ ಬೇರುಗಳಾಗಿ ಉಳಿದಿವೆ. ಯಾರು ಪ್ರಶಸ್ತಿಗಳನ್ನ ಬಯಸಿ ಬಂದವರಲ್ಲ. ಕೇವಲ ಖ್ಯಾತಿಗಾಗಿ ಆಸೆ ಪಟ್ಟವರು ಅಲ್ಲ. ನಟನೆಯಿಂದ ದುರಂತ ಅಂತ್ಯದವರೆಗೂ ಜೀವನ ಸವೆಸಿದ ನಟರ ಲಿಸ್ಟ್ ತುಂಬಾ ದೊಡ್ಡದಿದೆ. ಹಲವರಿಗೆ ಸಿಗಬೇಕಾದ ಮಾನ್ಯತೆಯೇ ಸಿಕ್ಕಿಲ್ಲ. ಯಾವ ಸಂಘ-ಸಂಸ್ಥೆಗಳು ಕರೆದು ಪ್ರಶಸ್ತಿ ಕೊಟ್ಟಿಲ್ಲ. ಇದರ ಮಧ್ಯೆ ಕೆಲವು ಕಲಾವಿದರಿಗೆ ಮಾತ್ರ ಕರ್ನಾಟಕ ಪ್ರಶಸ್ತಿ ಕೊಡಬೇಕಾ ಎಂಬ ಚರ್ಚೆ ಗಾಂಧಿನಗರವನ್ನು ಆವರಿಸಿಕೊಂಡು ಬಿಟ್ಟಿದೆ.
ಸಾಧನೆಗೆ ಯಾವ ಸ್ಪರ್ಧೆಯೂ ಇಲ್ಲ. ಕನ್ನಡ,ಕರ್ನಾಟಕ,ನೆಲ-ಜಲ, ಭಾಷೆ ಮತ್ತು ಅಸ್ಮಿತೆಯ ವಿಚಾರವಾಗಿ ನಮ್ಮಲ್ಲಿ ಅನೇಕ ಹಿರಿಯ ಇತಿಹಾಸಗಳಿವೆ. ಎಲ್ಲರಿಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಾಧ್ಯವೇ? ಅಥವಾ ಇವರು ಬೇಕು,ಅವರು ಬೇಡ ಎಂಬ ದಡ್ಡ ತೀರ್ಮಾನ ಆಗುತ್ತದೆಯೇ? ಯೋಚನೆ ಕ್ರಾಂತಿಗೆ ಬುನಾದಿ. ಹಾದಿಯ ಉದ್ದೇಶ ಮರೆಯಾಗದಿರಲಿ..!