ಬೆಂಗಳೂರು: ಕರ್ನಾಟಕ ಸರ್ಕಾರವು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮತ್ತು ವೃತ್ತಿ ಕುಲಕಸುಬುದಾರರಿಗೆ ಸಾಲ ಹಾಗೂ ಸಹಾಯಧನವನ್ನು ಒದಗಿಸುವ ದೃಷ್ಟಿಯಿಂದ ಕಾಯಕ ಕಿರಣ (Karnataka Kayaka Yojana 2025) ಎಂಬ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ 3ಬಿ ವರ್ಗಕ್ಕೆ ಸೇರಿದ ಲಿಂಗಾಯತ ಸಮುದಾಯದವರು ಹಾಗೂ ಲಿಂಗಾಯತ ಉಪಜಾತಿಯವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಸಾಲ ಹಾಗೂ ಸಹಾಯಧನ ನೀಡಲಾಗುತ್ತದೆ.
ಕಾಯಕ ಕಿರಣ ಯೋಜನೆ ಅನ್ವಯ 47 ಗುರುತಿಸಿರುವ ವೃತ್ತಿ ಕುಲಕಸುಬುದಾರರು ಮತ್ತು ಕುಶಲಕರ್ಮಿಗಳಿಗೆ 1 ಲಕ್ಷ ರೂ.ವರೆಗೆ ಸಹಾಯಧನ ಮತ್ತು ಸಾಲದ ಸೌಲಭ್ಯ ನೀಡಲಾಗುತ್ತದೆ. ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಬೇಕು. ಇಲ್ಲವೇ, https://kvldcl.karnataka.gov.in/26/kayaka-kirana-cf/kn ವೆಬ್ ಸೈಟ್ ಗೆ ಭೇಟಿ ನೀಡಬೇಕು.
ಅರ್ಹತೆಗಳು ಏನೇನು?
• ಅರ್ಜಿದಾರರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರಬೇಕು ಹಾಗೂ ಸಂಬಂಧಪಟ್ಟ ಪ್ರಾಧಿಕಾರದಿಂದ ಜಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.
• ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
• ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ 98 ಸಾವಿರ ರೂ. ಹಾಗೂ ಪಟ್ಟಣ ಪ್ರದೇಶವರಿಗೆ 1.2 ಲಕ್ಷ ರೂ. ಮಿತಿಯಲ್ಲಿರಬೇಕು.
• ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು.
• ಕಳೆದ 03 ವರ್ಷಗಳಿಂದ ಸರ್ಕಾರದ/ ನಿಗಮದ ಬೇರೆ ಯಾವುದಾದರೂ ಯೋಜನೆಗಳಲ್ಲಿ ಸಹಾಯಧನ/ಸಾಲ ಪಡೆದವರು ಈ ಯೋಜನೆ ಅಡಿ ಸೌಲಭ್ಯ ಪಡೆಯಲು ಅರ್ಹರಲ್ಲ.
• ಮಹಿಳೆಯರಿಗೆ ಈ ಯೋಜನೆಯಲ್ಲಿ ಶೇ.33 ರಷ್ಟು ಮೀಸಲು ನಿಗದಿಪಡಿಸಿದೆ.
• ಅಂಗವಿಕಲರಿಗೆ ಈ ಯೋಜನೆಯಲ್ಲಿ ಶೇ.5 ರಷ್ಟು ಮೀಸಲು ನಿಗದಿಪಡಿಸಿದೆ.
• ಒಂದು ಕುಟುಂಬದಲ್ಲಿ ಒಬ್ಬ ಅಭ್ಯರ್ಥಿಗೆ ಮಾತ್ರ ಅವಕಾಶವಿರುತ್ತದೆ.
• ಅರ್ಜಿದಾರರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ಹೊಂದಿರಬೇಕು.
• ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು.
ಸಾಲ ಹಾಗೂ ಸಹಾಯಧನದ ವಿವರ
• ವೈಯಕ್ತಿಕ ಸಾಲ: ಅರ್ಜಿದಾರರು ಸಾಂಪ್ರದಾಯಿಕ ವೃತ್ತಿ ಮತ್ತು ಕೌಶಲ್ಯತೆ ಹೊಂದಿರುವ ವೃತ್ತಿ ನಿರ್ವಹಿಸಲು ಸಾಮಾರ್ಥ್ಯಕ್ಕನುಗುಣವಾಗಿ ಗರಿಷ್ಠ 1 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವನ್ನು ಈ ಕೆಳಕಂಡಂತೆ ಒದಗಿಸುವುದು.
• 50,000 ರೂ.ಗಳವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ.50ರಷ್ಟು ಗರಿಷ್ಠ 25,000 ರೂ.ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.50ರಷ್ಟು ಗರಿಷ್ಠ 25,000 ರೂ.ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡುವುದು.
• 50,001 ರೂ.ನಿಂದ 1,00,000 ರೂ. ಗಳವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ.50ರಷ್ಟು ಗರಿಷ್ಠ 50,000 ರೂ.ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.50ರಷ್ಟು ಅಂದರೆ, ಗರಿಷ್ಠ 50,000 ರೂ.ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.



















