ಉಡುಪಿ: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ತಂಡ ಮರಳಿ ವಸತಿಗೃಹಕ್ಕೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.
ಚಿತ್ರೀಕರಣ ಮುಗಿಸಿ ಕೊಲ್ಲೂರು ವಸತಿ ಗೃಹಕ್ಕೆ ಮರಳುತ್ತಿದ್ದಾಗ ಮಿನಿ ಬಸ್ ಪಲ್ಟಿಯಾಗಿ ಹಲವು ಕಲಾವಿದರು ಗಾಯಗೊಂಡಿದ್ದಾರೆ. ಈ ಘಟನೆ ಕೊಲ್ಲೂರು ಸಮೀಪದ ಆನೆಜರಿ ಎದುರು ಸಂಭವಿಸಿದೆ.
ಮುದೂರಿನಲ್ಲಿ ನೃತ್ಯ ಚಿತ್ರೀಕರಣ ಮುಗಿಸಿ ಸುಮಾರು 20ಕ್ಕೂ ಅಧಿಕ ಕಿರಿಯ ನೃತ್ಯ ಕಲಾವಿದರು ತಮ್ಮ ವಸತಿಗೃಹಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರು ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಹೀಗಾಗಿ ವಾಹನ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಗಾಯಗೊಂಡ ಹಲವು ಕಲಾವಿದರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಮೊಬೈಲ್ ಬಳಕೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಕಲಾವಿದರು ಆರೋಪಿಸಿ, ಚಾಲಕನಿಗೆ ಥಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.