ಮುಂಬೈ: ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನಿಂದ ‘ಸೇವಿಂಗ್ಸ್ ಪ್ರೊ’ ಎಂಬ ಹೊಸ ಫೀಚರ್ ಪರಿಚಯಿಸಲಾಗಿದೆ. ಇದು ಹೆಚ್ಚುವರಿ ಹಣವನ್ನು ಆಯ್ದ ಓವರ್ ನೈಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಸ್ವಯಂಚಾಲಿತವಾಗಿ ಹೂಡಿಕೆ ಮಾಡಲು ಖಾತೆದಾರರಿಗೆ ಅನುವು ಮಾಡಿಕೊಡುತ್ತದೆ. ಈ ಫೀಚರ್ ಅನ್ನು ಜಿಯೋಫೈನಾನ್ಸ್ ಅಪ್ಲಿಕೇಷನ್ ಮೂಲಕ ಬಳಕೆ ಮಾಡಬಹುದು.
ಈ ಉಪಕ್ರಮದ ಅಡಿಯಲ್ಲಿ ಗ್ರಾಹಕರು ರೂ. 5,000 ರಿಂದ ಪ್ರಾರಂಭವಾಗುವಂತೆ ಕನಿಷ್ಠ ಬ್ಯಾಲೆನ್ಸ್ ಮಿತಿಯನ್ನು ನಿಗದಿ ಮಾಡಿಕೊಳ್ಳಬಹುದು ಮತ್ತು ಈ ಮೊತ್ತಕ್ಕಿಂತ ಹೆಚ್ಚಿನ ಯಾವುದೇ ಹಣವನ್ನು ಓವರ್ ನೈಟ್ ಮ್ಯೂಚುವಲ್ ಫಂಡ್‌ಗಳ ಗ್ರೋಥ್ ಪ್ಲಾನ್ ಗಳಲ್ಲಿ ಸ್ವಯಂಚಾಲಿತವಾಗಿ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆದಾರರು ದಿನಕ್ಕೆ ರೂ. 1.50 ಲಕ್ಷದವರೆಗೆ ಹಣವನ್ನು ಮೀಸಲು ಇಡಬಹುದು. ತಮ್ಮ ಹೂಡಿಕೆಯ ಶೇ 90ರ ವರೆಗೆ ತಕ್ಷಣವೇ ರಿಡೀಮ್ ಮಾಡುವ ಆಯ್ಕೆಯಿರುತ್ತದೆ, ಆದರೆ ಗರಿಷ್ಠ ಮಿತಿ ರೂ. 50,000ಕ್ಕೆ ಒಳಪಟ್ಟಿರುತ್ತದೆ. ಹೆಚ್ಚುವರಿ ರಿಡೀಮ್‌ಗಳು ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಸೆಟ್ಲ್ ಮೆಂಟ್ ಟೈಮ್‌ಲೈನ್‌ಗಳನ್ನು ಅನುಸರಿಸುತ್ತವೆ.
ಈ ಫೀಚರ್ ಗೆ ಯಾವುದೇ ಪ್ರವೇಶ ಅಥವಾ ನಿರ್ಗಮನ ಶುಲ್ಕಗಳು ಇರುವುದಿಲ್ಲ ಮತ್ತು ಲಾಕ್-ಇನ್ ಅವಧಿ ಸಹ ಇರುವುದಿಲ್ಲ. ರಿಟರ್ನ್‌ಗಳು ಆಯಾ ಮ್ಯೂಚುವಲ್ ಫಂಡ್‌ಗಳ ಕಾರ್ಯಕ್ಷಮತೆ ಮೇಲೆ ಆಧಾರವಾಗಿ ಇದ್ದು, ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ. ಕಂಪನಿಯ ಪ್ರಕಾರ, ಈ ಫಂಡ್ ಗಳ ಮೇಲಿನ ವಾರ್ಷಿಕ ಆದಾಯವು ಕಳೆದ ಎರಡು ವರ್ಷಗಳಲ್ಲಿ ಶೇ 6.5ರ ವರೆಗೆ ಇದೆ.
ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ವಿನೋದ್ ಈಶ್ವರನ್ ಅವರು ಈ ಬಗ್ಗೆ ಮಾತನಾಡಿ, ಸೇವಿಂಗ್ಸ್ ಪ್ರೊ ಗ್ರಾಹಕರಿಗೆ ತಮ್ಮ ಖಾತೆಗಳಲ್ಲಿನ ನಿಷ್ಕ್ರಿಯ ಬ್ಯಾಲೆನ್ಸ್‌ಗಳಿಂದ ಸಂಪೂರ್ಣ ಡಿಜಿಟಲ್ ಮತ್ತು ಸ್ವಯಂಚಾಲಿತ ರೀತಿಯಲ್ಲಿ ಗಳಿಕೆ ಮಾಡಿಕೊಳ್ಳುವ ಆಯ್ಕೆಯನ್ನು ನೀಡುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.
ಸೇವಿಂಗ್ಸ್ ಪ್ರೊ ಫೀಚರ್ ಅನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸ ಜಿಯೋ ಪೇಮೆಂಟ್ಸ್ ಬ್ಯಾಂಕ್ ಖಾತೆದಾರರು ಜಿಯೋಫೈನಾನ್ಸ್ ಅಪ್ಲಿಕೇಷನ್ ಮೂಲಕ ಬಳಸಬಹುದು. ಇದು ಹೂಡಿಕೆಗಳು ಮತ್ತು ಆದಾಯವನ್ನು ನಿಗಾ ಮಾಡುವುದಕ್ಕೆ ಬೇಕಾದ ಟೂಲ್ ಗಳನ್ನು ಸಹ ಒದಗಿಸುತ್ತದೆ.