ಡೆಟ್ರಾಯಿಟ್: ಜೀಪ್ ಸಂಸ್ಥೆಯು ತನ್ನ ಹೊಚ್ಚ ಹೊಸ ಮತ್ತು ಸಂಪೂರ್ಣ ಎಲೆಕ್ಟ್ರಿಕ್ (EV) ಎಸ್‌ಯುವಿ ‘2026 ಜೀಪ್ ರೆಕಾನ್’ (2026 Jeep Recon) ಅನ್ನು ಅನಾವರಣಗೊಳಿಸಿದೆ. 650 ಅಶ್ವಶಕ್ತಿ (bhp) ಸಾಮರ್ಥ್ಯದ ಈ ವಾಹನವು, ಆಫ್-ರೋಡ್ (Off-road) ಸಾಹಸಗಳಿಗೆಂದೇ ವಿಶೇಷವಾಗಿ ವಿನ್ಯಾಸಗೊಂಡಿದ್ದು, ತೆಗೆಯಬಹುದಾದ ಬಾಗಿಲುಗಳು ಇದರ ಪ್ರಮುಖ ಆಕರ್ಷಣೆ. ಮುಂದಿನ ವರ್ಷದ ಆರಂಭದಲ್ಲಿ ಉತ್ಪಾದನೆಗೆ ಸಜ್ಜಾಗಿರುವ ಈ ‘ರೆಕಾನ್’, ಆಧುನಿಕ ಎಲೆಕ್ಟ್ರಿಕ್ ತಂತ್ರಜ್ಞಾನ ಮತ್ತು ಜೀಪ್‌ನ ಸಾಂಪ್ರದಾಯಿಕ ಶಕ್ತಿಯನ್ನು ಬೆಸೆಯುವ ಪ್ರಯತ್ನವಾಗಿದೆ.

ಎಂಜಿನ್ ಮತ್ತು ಸಾಮರ್ಥ್ಯ
ಹೊಸ ‘ಎಲೆಕ್ಟ್ರಿಕ್-ಫಸ್ಟ್’ ಆರ್ಕಿಟೆಕ್ಚರ್ ಆಧಾರಿತವಾಗಿ ನಿರ್ಮಿಸಲಾಗಿರುವ ಈ ಎಸ್‌ಯುವಿಯು ಡ್ಯುಯಲ್ ಎಲೆಕ್ಟ್ರಿಕ್ ಡ್ರೈವ್ ಮಾಡ್ಯೂಲ್‌ಗಳನ್ನು ಹೊಂದಿದೆ. ಇದು 650bhp ಶಕ್ತಿ ಮತ್ತು 840Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 402 ಕಿ.ಮೀ. ವರೆಗೆ ಕ್ರಮಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಆಫ್-ರೋಡ್ ವೈಶಿಷ್ಟ್ಯಗಳು
‘ರೆಕಾನ್’ ಎಸ್‌ಯುವಿಯು ‘ಸೆಲೆಕ್-ಟೆರೈನ್’ (Selec-Terrain) ಸಿಸ್ಟಮ್ ಅನ್ನು ಹೊಂದಿದ್ದು, ಇದರಲ್ಲಿ ಆಟೋ, ಸ್ಪೋರ್ಟ್, ಸ್ನೋ ಮತ್ತು ಸ್ಯಾಂಡ್ ಮೋಡ್‌ಗಳಿವೆ. ವಿಶೇಷವಾಗಿ ಬಿಡುಗಡೆಯಾಗಲಿರುವ ‘ಮೊಯಾಬ್’ (Moab) ಆವೃತ್ತಿಯು ಹೆಚ್ಚುವರಿಯಾಗಿ ‘ರಾಕ್ ಮೋಡ್’ (Rock Mode) ಅನ್ನು ಒಳಗೊಂಡಿದ್ದು, ಇದು ಕಠಿಣ ಭೂಪ್ರದೇಶಗಳಲ್ಲಿ ಚಾಲನೆಗೆ ನೆರವಾಗಲಿದೆ. 33-ಇಂಚಿನ ಬೃಹತ್ ಟೈರ್‌ಗಳು, ಎಲೆಕ್ಟ್ರಾನಿಕ್ ಲಾಕಿಂಗ್ ರಿಯರ್ ಡಿಫರೆನ್ಷಿಯಲ್ ಮತ್ತು 238 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ (Ground Clearance) ಇದರ ಮತ್ತಷ್ಟು ವಿಶೇಷತೆಗಳು.

ವಿನ್ಯಾಸ ಮತ್ತು ಒಳಾಂಗಣ
ಜೀಪ್‌ನ ಸಾಂಪ್ರದಾಯಿಕ ಏಳು ಸ್ಲಾಟ್‌ಗಳ ಗ್ರಿಲ್, U-ಆಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ವಾಹನಕ್ಕೆ ಗಟ್ಟಿತನವನ್ನು ನೀಡುತ್ತವೆ. ಸಾಹಸ ಪ್ರಿಯರಿಗಾಗಿಯೇ ವಿಶೇಷವಾಗಿ, ಇದರ ಬಾಗಿಲುಗಳು ಮತ್ತು ಹಿಂದಿನ ಗ್ಲಾಸ್‌ಗಳನ್ನು ಯಾವುದೇ ಉಪಕರಣಗಳಿಲ್ಲದೆ ತೆಗೆಯಬಹುದಾಗಿದೆ. ಒಳಾಂಗಣದಲ್ಲಿ 14.5-ಇಂಚಿನ ಬೃಹತ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 12.3-ಇಂಚಿನ ಡಿಜಿಟಲ್ ಕ್ಲಸ್ಟರ್ ಇದ್ದು, ಅತ್ಯಾಧುನಿಕ ‘Uconnect 5’ ಸಾಫ್ಟ್‌ವೇರ್ ಅನ್ನು ಅಳವಡಿಸಲಾಗಿದೆ.

ಈ ವಾಹನವು ಮೆಕ್ಸಿಕೋದ ಟೊಲುಕಾ ಅಸೆಂಬ್ಲಿ ಪ್ಲಾಂಟ್‌ನಲ್ಲಿ ತಯಾರಾಗಲಿದ್ದು, ಮೊದಲು ಅಮೆರಿಕ ಮತ್ತು ಕೆನಡಾ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ. ನಂತರದ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಗೂ ಲಗ್ಗೆ ಇಡಲಿದೆ.
ಇದನ್ನೂ ಓದಿ: ದುಬೈ ಏರ್ ಶೋನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ



















