ಬೆಂಗಳೂರು : 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲು ಟೀಮ್ ಇಂಡಿಯಾ ಸಜ್ಜಾಗುತ್ತಿದ್ದರೆ, ತಂಡದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ನಿರ್ಮಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾರ್ಚ್ 6ರಂದು ಬುಮ್ರಾ ಅವರ ಸಾಧನೆಯ ಗಮನಾರ್ಹ ಅಂಕಿಅಂಶಗಳನ್ನು ಹಂಚಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ತಮ್ಮ ನಿಖರ ಯಾರ್ಕರ್ ಹಾಗೂ ಮಾರಕ ದಾಳಿಯ ಮೂಲಕವೇ ವಿಶ್ವ ಕ್ರಿಕೆಟ್‌ನಲ್ಲಿ ಅಚ್ಚರಿ ಮೂಡಿಸಿರುವ ಬುಮ್ರಾ, ಇದೀಗ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಗಳಿಂದ ಒಟ್ಟು 500 ವಿಕೆಟ್‌ಗಳನ್ನು ಕಬಳಿಸಿದ ಮಹತ್ವದ ಸಾಧನೆ ಮಾಡಿದ್ದಾರೆ. ಇದು ಕ್ರಿಕೆಟ್ ಲೋಕದಲ್ಲಿ ಬೌಲರ್‌ಗಳ ಪಾಲಿಗೆ ಅತ್ಯಂತ ಪ್ರತಿಷ್ಠಿತ ಹಾಗೂ ಅಪರೂಪದ ಮೈಲಿಗಲ್ಲಾಗಿದೆ.
500 ವಿಕೆಟ್‌ಗಳ ವಿವರ ಮತ್ತು 8ನೇ ಭಾರತೀಯ ಸಾಧಕ
ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮುಂಬೈ ಮೂಲದ ಈ ವೇಗಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 234 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಏಕದಿನ ಮಾದರಿಯಲ್ಲಿ 149 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದರೆ, ಚುಟುಕು ಕ್ರಿಕೆಟ್ ಎಂದೇ ಕರೆಯಲ್ಪಡುವ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 117 ವಿಕೆಟ್‌ಗಳನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ.
ಈ ಮೂಲಕ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ಭಾರತದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ಜಸ್‌ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ. ಟಿ20 ವಿಶ್ವಕಪ್ 2026ರ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬುಮ್ರಾ ಈ ಪ್ರತಿಷ್ಠಿತ ಮೈಲಿಗಲ್ಲನ್ನು ತಲುಪಿದರು. ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಅವರನ್ನು ಅಕ್ಷರ್ ಪಟೇಲ್ ಅವರ ಅತ್ಯದ್ಭುತ ಕ್ಯಾಚ್ ನೆರವಿನಿಂದ ಪೆವಿಲಿಯನ್‌ಗಟ್ಟಿದಾಗ ಬುಮ್ರಾ ಅವರ ವಿಕೆಟ್ ಗಳಿಕೆ 500ರ ಗಡಿ ಮುಟ್ಟಿತು. ಬುಮ್ರಾ ಅವರಿಗಿಂತ ಮುನ್ನ ಭಾರತದ ದಿಗ್ಗಜ ಬೌಲರ್‌ಗಳಾದ ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಕಪಿಲ್ ದೇವ್, ರವೀಂದ್ರ ಜಡೇಜಾ, ಜಹೀರ್ ಖಾನ್ ಹಾಗೂ ಜಾವಗಲ್ ಶ್ರೀನಾಥ್ ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಆ ದಿಗ್ಗಜರ ಸಾಲಿಗೆ ಬುಮ್ರಾ ಕೂಡ ಸೇರ್ಪಡೆಯಾಗಿದ್ದಾರೆ.
ಕಿವೀಸ್ ಬ್ಯಾಟರ್‌ಗಳಿಂದ ಎದುರಾಗಲಿದೆ ಕಠಿಣ ಸವಾಲು
ಫೈನಲ್ ಪಂದ್ಯದಲ್ಲಿ ಬುಮ್ರಾ ಅವರಿಗೆ ನ್ಯೂಜಿಲೆಂಡ್ ಬ್ಯಾಟರ್‌ಗಳಿಂದ, ವಿಶೇಷವಾಗಿ ಕಿವೀಸ್ ಆರಂಭಿಕರಿಂದ ಕಠಿಣ ಪೈಪೋಟಿ ಎದುರಾಗುವುದು ಖಚಿತ. ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆರಂಭಿಕ ಜೋಡಿಯಾದ ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು. ಸೀಫರ್ಟ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರೆ, ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಫಿನ್ ಅಲೆನ್ ಆಕರ್ಷಕ ಶತಕ ಬಾರಿಸಿ ಅಜೇಯರಾಗಿ ಉಳಿಯುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಸುಲಭವಾಗಿ ಫೈನಲ್‌ಗೆ ಕೊಂಡೊಯ್ದಿದ್ದರು. ಹಾಗಾಗಿ ಈ ಫಾರ್ಮ್‌ನಲ್ಲಿರುವ ಸ್ಪೋಟಕ ಜೋಡಿಯನ್ನು ಆರಂಭದಲ್ಲೇ ಕಟ್ಟಿಹಾಕುವುದು ಬುಮ್ರಾ ಸೇರಿದಂತೆ ಸಂಪೂರ್ಣ ಭಾರತೀಯ ಬೌಲಿಂಗ್ ವಿಭಾಗಕ್ಕೆ ದೊಡ್ಡ ಸವಾಲಾಗಲಿದೆ.
ಕಿವೀಸ್ ವಿರುದ್ಧ ಬುಮ್ರಾ ಅಂಕಿಅಂಶಗಳೇನು?
ಕ್ರಿಕ್‌ಬಝ್ ನೀಡಿರುವ ಅಂಕಿಅಂಶಗಳ ಪ್ರಕಾರ, ಜಸ್‌ಪ್ರೀತ್ ಬುಮ್ರಾ ಅವರ ಒಟ್ಟಾರೆ ವೃತ್ತಿಜೀವನದ ಬೌಲಿಂಗ್ ಪ್ರದರ್ಶನಕ್ಕೆ ಹೋಲಿಸಿದರೆ ನ್ಯೂಜಿಲೆಂಡ್ ವಿರುದ್ಧದ ಅವರ ದಾಖಲೆಗಳು ಕೊಂಚ ದುರ್ಬಲವಾಗಿವೆ. ಟೆಸ್ಟ್, ಏಕದಿನ ಹಾಗೂ ಟಿ20 ಮೂರೂ ಮಾದರಿಗಳಲ್ಲಿ ಬುಮ್ರಾ ಅವರ ಒಟ್ಟಾರೆ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಅತ್ಯುತ್ತಮವಾಗಿದೆ. ಒಟ್ಟಾರೆ ಟೆಸ್ಟ್‌ನಲ್ಲಿ 19.79, ಏಕದಿನದಲ್ಲಿ 23.55 ಹಾಗೂ ಟಿ20ಯಲ್ಲಿ 18.57ರ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ.
ಆದರೆ ನ್ಯೂಜಿಲೆಂಡ್ ವಿರುದ್ಧ ಬೌಲಿಂಗ್ ಮಾಡುವಾಗ ಟೆಸ್ಟ್‌ನಲ್ಲಿ 45.44ರ ಸರಾಸರಿ, ಏಕದಿನದಲ್ಲಿ 39.20 ಹಾಗೂ ಟಿ20ಯಲ್ಲಿ 23.37ರ ಸರಾಸರಿ ಹೊಂದಿದ್ದು, ಕಿವೀಸ್ ವಿರುದ್ಧ ವಿಕೆಟ್ ಪಡೆಯಲು ಕೊಂಚ ಹೆಚ್ಚು ಶ್ರಮಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಹಿನ್ನೆಲೆಯಲ್ಲಿ, ಫೈನಲ್ ಮಹಾಸಮರದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ಗಳ ವಿರುದ್ಧ ಬುಮ್ರಾ ಯಾವ ರೀತಿಯ ರಣತಂತ್ರದೊಂದಿಗೆ ಕಣಕ್ಕಿಳಿಯಲಿದ್ದಾರೆ ಹಾಗೂ ತಮ್ಮ ಹಳೆಯ ದಾಖಲೆಗಳನ್ನು ಮೀರಿ ನಿಂತು ಟೀಮ್ ಇಂಡಿಯಾಕ್ಕೆ ಟ್ರೋಫಿ ಗೆದ್ದುಕೊಡಲಿದ್ದಾರೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : 2026ರ ಟಿ20 ವಿಶ್ವಕಪ್ : ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಫಾಫ್ ಡು ಪ್ಲೆಸಿಸ್



















