ಮುಂಬೈ: ಯಾರ್ಕರ್ ಸ್ಪೆಷಲಿಸ್ಟ್ ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಋತುವಿನ ಮೊದಲ ಐದು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಂತರ ಬೆನ್ನು ನೋವಿಗೆ ತುತ್ತಾದ ಬುಮ್ರಾ, ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದರು. ಕಳೆದ ವಾರ ಬುಮ್ರಾ ಐಪಿಎಲ್ನಲ್ಲಿ ಆಡುವುದು ಅನಿಶ್ಚಿತವಾಗಿತ್ತು. ಇದೀಗ ಅವರು 5 ಪಂದ್ಯಗಳ ನಂತರ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದ ಬುಮ್ರಾ, ಐಪಿಎಲ್ನಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಫಿಟ್ನೆಸ್ ಪರೀಕ್ಷೆಯಲ್ಲಿ ಬುಮ್ರಾ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ತಿಳಿದುಬಂದಿದ್ದು, ಮತ್ತೊಂದಿಷ್ಟು ದಿನಗಳ ಕಾಲ ಅವರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅವರು ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ.
ಮಾರ್ಚ್ 23ರಂದು ಮುಂಬೈ ತಂಡ ಕಣಕ್ಕಿಳಿಯಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ. ಬುಮ್ರಾ ಅಲಭ್ಯತೆ ಬಗ್ಗೆ ಫ್ರಾಂಚೈಸಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್, ಬುಮ್ರಾ ಮತ್ತೊಮ್ಮೆ ಬೆನ್ನು ನೋವಿನ ಗಾಯಕ್ಕೆ ತುತ್ತಾದರೆ ಅವರ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಳ್ಳಬಹುದು ಎಂದು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ
ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಜ್, ಕರ್ಣ್ ಶರ್ಮ, ದೀಪಕ್ ಚಹರ್, ವಿಲ್ ಜಾಕ್ಸ್, ಮಿಚೆಲ್ ಸ್ಯಾಂಟ್ನರ್, ರ್ಯಾನ್ ರಿಕೆಲ್ಟನ್, ಅಶ್ವನಿ ಕುಮಾರ್, ರೀಸ್ ಟಾಪ್ಲೆ, ಕೆಎಲ್ ಶ್ರೀಜಿತ್, ರಾಜ್ ಅಂಗದ್ ಬಾವ, ಸತ್ಯನಾರಾಯಣ ರಾಜು, ಬೆವನ್ ಜೇಕಬ್ಸ್, ವಿಘ್ನೇಶ್ ಪುಥರ್, ಅರ್ಜುನ್ ತೆಂಡೂಲ್ಕರ್, ಲಿಜಾಡ್ ವಿಲಿಯಮ್ಸ್.