ಬಾಗಲಕೋಟೆ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ವಿಚಾರವಾಗಿ ಜಿಲ್ಲೆಯಲ್ಲಿ ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಹುಗಾರಿಕೆ ಫೇಲಿವರ್ ಆಗಿರುವುದು ಬಿಜೆಪಿ ಸರ್ಕಾರದಲ್ಲಿ ಇದೇ ಮೊದಲಲ್ಲ. ಕಾರ್ಗಿಲ್ ಯುದ್ಧದಲ್ಲಿ ಫೇಲ್ ಆಗಿತ್ತು. ಪುಲ್ವಾಮಾದಲ್ಲಿ ಫೇಲ್ ಆಗಿತ್ತು. ಈಗ ಪೆಹಲ್ಗಾಮ್ ನಲ್ಲಿ ಫೇಲ್ ಆಗಿದೆ.
ಹಿಂದೂ ಐಡಿ ಕಾರ್ಡ್ ನೋಡಿದರು, ಗುಂಡು ಹೊಡೆದರು ಅಂತಾರೆ. ಉಗ್ರರು ಮುಸ್ಲಿಂರನ್ನು ಕೊಂದಿಲ್ವಾ? ಎಂದು ಪ್ರಶ್ನಿಸಿದ ಅವರು, ಯಾರೇ ಸತ್ತರೂ ಅದನ್ನು ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ದೇಶಕ್ಕೆ ಗಂಡಾಂತರ ಬಂದಿದೆ. ಸಾವುಗಳಾಗಿವೆ. ಅದಕ್ಕೆ ನೋವು ವ್ಯಕ್ತಪಡಿಸುವುದು ಬಿಟ್ಟು ಹಿಂದೂ ಧರ್ಮದವರನ್ನಷ್ಟೇ ಹುಡುಕಿ ಹುಡುಕಿ ಕೊಂದಿದ್ದಾರೆ. ಅಂದ್ರೆ ಇದಕ್ಕೆ ಯಾವ ನ್ಯಾಯ ಅಂತಾರೆ? ಚುನಾವಣೆ ಬಂದಾಗ ಕಾರ್ಗಿಲ್ ನಲ್ಲಿ ಯಾರೇ ಸತ್ತರೂ ಮುಸ್ಲಿಂರೇ ಕೊಂದರು ಅಂತಾರೆ. ಆ ನಂತರ ಅಹಸಜ ಸಾವು ಅಂತಾ ಬಂತು. ಬಿಜೆಪಿ ಹಿಂದೂಗಳನ್ನು ಕೂಡಿಸಿಕೊಂಡು ಓಟ್ ಹಾಕಿಸಿಕೊಂಡು ಎಲೆಕ್ಷನ್ ಮಾಡಿತು. ಬಿಜೆಪಿ ಎಲ್ಲವನ್ನೂ ಚುನಾವಣೆ ದೃಷ್ಟಿಯಿಂದ ನೋಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಘಟನೆಯಲ್ಲಿ ಉಳಿದು ಬಂದಿರುವ ಮಹಿಳೆ, ನನ್ನನ್ನು, ನನ್ನ ಮಗುವನ್ನು ಬದುಕಿಸಿದವನು ಒಬ್ಬ ಮುಸ್ಲಿಂ ಎಂದು ಹೇಳಿದ್ದಾರೆ. ಎಷ್ಟೋ ಮುಸ್ಲಿಂ ಯುವಕರು, ಹಿಂದೂಗಳನ್ನು ರಕ್ಷಿಸಿಲ್ಲವಾ? ಅಲ್ಲಿ ನೋವು ಉಂಡವರು ನಮ್ಮನ್ನು ಮುಸ್ಲಿಂ ಯುವಕರು ರಕ್ಷಿಸಿದ್ದಾರೆ ಎಂದು ಹೇಳಿದ್ದಾರೆಯೇ ಹೊರತು, ಹಿಂದೂ ಎಂದು ಕೇಳಿ ಹೊಡೆದಿದ್ದಾರೆ ಎಂದು ಯಾರೂ ಹೇಳಿಲ್ಲ. ಹೀಗಾಗಿ ಬಿಜೆಪಿ ವಿವೇಚನೆಯಿಂದ ಮಾತನಾಡಬೇಕಿದೆ ಎಂದು ಕಿಡಿಕಾರಿದ್ದಾರೆ.


















