ಮುಂಬಯಿ: ಬಿಸಿಸಿಐ ಇತ್ತೀಚೆಗೆ, ಆಟಗಾರರ ಪ್ರವಾಸದ ಸಮಯದಲ್ಲಿ ಕುಟುಂಬ ಸದಸ್ಯರು ಹೋಗುವುದನ್ನು ನಿರ್ಬಂಧಿಸುವ ಹೊಸ ನಿಯಮ ಪರಿಚಯಿಸಿತ್ತು. ಈ ಕ್ರಮದ ವಿರುದ್ಧ ಹಳೆಯ ಕ್ರಿಕೆಟ್ ಆಟಗಾರರು, ವಿಶೇಷವಾಗಿ ವಿದೇಶದಲ್ಲಿರುವವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆದರೆ ದಂತಕಥೆ ಸ್ವರೂಪದ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಕೂಡ ಬಿಸಿಸಿಐನ ಈ ನಿರ್ಧಾರವನ್ನು ಸಂಪೂರ್ಣ ತಪ್ಪು ಎಂದಿಲ್ಲ.
1983ರ ವಿಶ್ವಕಪ್ ವಿಜೇತ ನಾಯಕ ಪ್ರವಾಸಗಳಲ್ಲಿ ಕುಟುಂಬ ಸದಸ್ಯರನ್ನು ಕರೆದೊಯ್ಯುವುದರಲ್ಲಿ ತಪ್ಪೇನಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ತಂಡದ ಏಕತೆಯ ಅಗತ್ಯವನ್ನುಅವರು ಒತ್ತಿ ಹೇಳಿದ್ದಾರೆ. ಅವರು ಆಟಗಾರರು ತಮ್ಮ ದೇಶೀಯ ಕರ್ತವ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ತಂಡದೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂದು ಸಲಹೆ ನೀಡಿದ್ದಾರೆ.
ಕಪಿಲ್ ದೇವ್ ಬಿಸಿಸಿಐನ ಹೊಸ ನೀತಿಯನ್ನು ತಂಡದ ಏಕತೆಯನ್ನು ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಒಳ್ಳೆಯದು ಎಂದು ಪರಿಗಣಿಸಿದ್ದಾರೆ ಹೊಸದಾದ ನಿಯಮಗಳ ಪ್ರಕಾರ, 45 ದಿನಗಳಿಗಿಂತ ಹೆಚ್ಚು ಕಾಲದ ಪ್ರವಾಸಗಳಾಗಿದ್ದರೆ ಭಾರತೀಯ ಆಟಗಾರರ ಕುಟುಂಬದವರು 14 ದಿನಗಳವರೆಗೆ ಜೊತೆಯಾಗಿ ಇರಿಸಬಹುದು. ಚಿಕ್ಕ ಪ್ರವಾಸಗಳಾದರೆ ಕೇವಲ ಏಳು ದಿನಗಳ ವಾಸ್ತವ್ಯಕ್ಕೆ ಅವಕಾಶವಿರುತ್ತದೆ. ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವಿಫಲತೆಯ ನಂತರ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.
ಕಪಿಲ್ ದೇವ್ “ಕ್ರಿಕೆಟ್ ಅಡ್ಡಾ” ಜೊತೆ ಮಾತನಾಡುತ್ತಾ, “ನಿಮ್ಮ ಪತ್ನಿಯನ್ನು ಪ್ರವಾಸಗಳಿಗೆ ಕರೆದೊಯ್ಯುವುದು ತಪ್ಪಲ್ಲ. ಆದರೆ ನನಗೆ ಅನಿಸುವುದೇನೆಂದರೆ, ಒಂದು ತಿಂಗಳ ಪ್ರವಾಸಕ್ಕೆ 20 ದಿನಗಳವರೆಗೆ ಅವಕಾಶ ನೀಡಬಾರದು. ಆಟಗಾರರು ತಂಡದ ಜೊತೆ ಹೆಚ್ಚು ಸಮಯ ಕಳೆಯಬಹುದು,” ಎಂದು ಹೇಳಿದ್ದಾರೆ. ತಂಡದ ಪ್ರಯಾಣದ ವಿಚಾರದಲ್ಲಿಯೂ ಅವರು ಬಿಸಿಸಿಐನ ನಿರ್ಧಾರ ಬೆಂಬಲಿಸಿದ್ದಾರೆ. ಕ್ರಿಕೆಟ್ ಒಂದು ತಂಡದ ಕ್ರೀಡೆಯಾಗಿರುವುದರಿಂದ ಆಟಗಾರರು ಒಟ್ಟಾಗಿ ಪ್ರಯಾಣ ಮಾಡುವುದು ಅಗತ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕೊಹ್ಲಿ, ವಿರಾಟ್ ರಣಜಿ ಆಟ, ಕಪಿಲ್ ದೇವ್ ಹೇಳಿದ್ದೇನು?
ಬಿಸಿಸಿಐ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಆಡದಿದ್ದಾಗ ರಾಜ್ಯ ತಂಡದ ಪರ ಆಡುವುದು ಕಡ್ಡಾಯಗೊಳಿಸಿದ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ರಣಜಿ ಟ್ರೋಫಿಗೆ ಮರಳಿದ್ದಾರೆ. ಕೊಹ್ಲಿ 13 ವರ್ಷಗಳ ನಂತರ ದೆಹಲಿ ಪರ ಆಡಿದ್ದಾರೆ. ಹಾಗೆಯೇ ರೋಹಿತ್ ಶರ್ಮಾ 10 ವರ್ಷಗಳ ನಂತರ ಮುಂಬೈ ಪರ ಆಡಿದ್ದಾರೆ.
ಈ ಕ್ರಮ ಸರಿಯೇ ಎಂಬ ಬಗ್ಗೆ ಕಪಿಲ್ ದೇವ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮಟ್ಟದ ಆಟಗಾರರು ಇಷ್ಟು ದೀರ್ಘ ಕಾಲದ ನಂತರ ಸ್ಥಳೀಯ ಕ್ರಿಕೆಟ್‌ಗೆ ಮರಳುವುದು ಸರಿಯಾಗಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
“ನನ್ನ ಪ್ರಶ್ನೆ ಏನೆಂದರೆ, ನಾವು ಗೆದ್ದಿದ್ದರೆ ಅಥವಾ ರೋಹಿತ್-ಕೊಹ್ಲಿ ರನ್ ಗಳಿಸಿದ್ದರೆ, ಅವರು ರಣಜಿ ಟ್ರೋಫಿ ಆಡುತ್ತಿದ್ದರಾ? ಅವರು ಎಷ್ಟು ರನ್ ಗಳಿಸುತ್ತಾರೋ ಎಂಬುದನ್ನು ನೋಡಬೇಡಿ; ವ್ಯವಸ್ಥೆಯನ್ನು ಬಲಪಡಿಸಬೇಕು. ನೀವು ಶೂನ್ಯ ರನ್ ಗಳಿಸಿದರೂ ಅಥವಾ ಲಕ್ಷಾಂತರ ರನ್ ಗಳಿಸಿದರೂ, ನೀವು ವ್ಯವಸ್ಥೆಯ ಒಳಗೆ ಉಳಿದು ಕ್ರಿಕೆಟ್ ಆಡಬೇಕು.” ಎಂದು ಅವರು ಹೇಳಿದ್ದಾರೆ.