ಇಸ್ರೇಲ್ ಹಾಗೂ ಇರಾನ್ ಗಡಿಯಲ್ಲಿ ಯುದ್ಧದ ಕಾರ್ಮೋಡ ಆವರಿಸಿ ಬಿಟ್ಟಿದೆ. ಸದ್ಯದ ಸ್ಥಿತಿ ಗಮನಿಸಿದರೆ, ಅಲ್ಲಿ ಯುದ್ಧ ಶತಸಿದ್ಧ ಎನ್ನಲಾಗುತ್ತಿದೆ. ಹಮಾಸ್ ಹಾಗೂ ಹೆಜ್ಬೊಲ್ಲಾ ಬಂಡುಕೋರ ಪಡೆಯ ಮೂವರು ಮುಖ್ಯಸ್ಥರ ಹತ್ಯೆಯ ನಂತರ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಭೀತಿ ಆವರಿಸಿದೆ. ಇಸ್ರೇಲ್ ವಿರುದ್ಧ ಪ್ರತೀಕಾರಕ್ಕೆ ಇರಾನ್ ಮಿತ್ರಕೂಟ ಹವಣಿಸುತ್ತಿದೆ. ಮಿತ್ರ ರಾಷ್ಟ್ರ ಇಸ್ರೇಲ್ ನೆರವಿಗೆ ಧಾವಿಸಿರುವ ಅಮೆರಿಕ, ಬ್ರಿಟನ್ ಮಿತ್ರಕೂಟದ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿವೆ. ಹೀಗಾಗಿ ಭಯಾನಕ ಯುದ್ಧದ ಆತಂಕ ಇಡೀ ಜಗತ್ತನ್ನು ಕಾಡುತ್ತಿದೆ.
ಪ್ಯಾಲೆಸ್ತೀನ್ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್ ರಕ್ಷಣಾ ಪಡೆ ಭಾನುವಾರ ಆಲ್ ಅಕ್ಸಾ ಆಸ್ಪತ್ರೆ ಸೇರಿದಂತೆ ಮತ್ತೊಂದು ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಒಟ್ಟು 7 ಜನರನ್ನು ಬಲಿ ಪಡೆದಿದೆ. ಅಲ್ಲದೇ, ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ 8 ಜನ, ವಾಹನಗಳ ಮೇಲೆ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಮಧ್ಯೆ ಪ್ಯಾಲೆಸ್ತೀನ್ ಬಂಡುಕೋರ ಗುಂಪು ಇಸ್ರೇಲ್ ನ ಟೆಲ್ ಅವಿವ್ ನಲ್ಲಿ ನಾಗರಿಕರ ಮೇಲೆ ದಾಳಿ ನಡೆಸಿದೆ. ಹಲವೆಡೆ ಜನರಿಗೆ ಚಾಕು ಇರಿಯಲಾಗಿದೆ. ಪರಿಣಾಮ ಇಬ್ಬರು ವೃದ್ಧರು ಬಲಿಯಾಗಿದ್ದಾರೆ. ಇಸ್ರೇಲ್ ಮೇಲೆ ಭಾರಿ ಸ್ಪೋಟಕ ಹೊತ್ತ ಐದು ಕ್ಷಿಪಣಿ ದಾಳಿ ನಡೆಸಲಾಗಿದ್ದು, ಗಡಿಯಲ್ಲೆ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಇಸ್ರೇಲಿ ಪ್ರದೇಶದ ಒಳಗೆ ಹೆಜ್ಬೊಲ್ಲಾ ಪಡೆಗಳು ತನ್ನ ದಾಳಿ ಮುಂದುವರೆಸಿವೆ.
ಇಸ್ರೇಲ್ ವಿರುದ್ಧ ಇರಾನ್ ಮತ್ತು ಹೆಹ್ಬೊಲ್ಲಾ ದಾಳಿಗಳು ಸೋಮವಾರ ಆರಂಭವಾಗಬಹುದು ಎಂದು ಜಿ 7 ದೇಶಗಳ ತನ್ನ ಮಿತ್ರರಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಎಚ್ಚರಿಕೆ ನೀಡಿದ್ದಾರೆ. ಆದರೆ, ತನ್ನ ಮೇಲಿನ ದಾಳಿ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೂಡ ವರದಿಯಾಗಿದೆ. ಹೀಗಾಗಿ ಜಗತ್ತು ಮತ್ತೊಂದು ಯುದ್ಧಕ್ಕೆ ತೆರೆದುಕೊಳ್ಳುವಂತಾಗಿದೆ.