ಟೆಹ್ರಾನ್ | ಪರ್ಷಿಯನ್ ಕೊಲ್ಲಿಯಲ್ಲಿ ತೈಲ ಸಾಗಿಸುತ್ತಿದ್ದ ಎರಡು ವಿದೇಶಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ತನ್ನ ಜಲಾಂತರ್ಗಾಮಿ ಡ್ರೋನ್ ಬಳಸಿ ಭಾರೀ ದಾಳಿ ನಡೆಸಿದೆ. ಇರಾಕ್ ಜಲಪ್ರದೇಶದಲ್ಲಿ ನಡೆದ ಈ ದಾಳಿಯಿಂದಾಗಿ ಹಡಗುಗಳು ಬೆಂಕಿಗಾಹುತಿಯಾಗಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಭಾರಿ ಕಾರ್ಯಾಚರಣೆಯ ಮೂಲಕ 38ಕ್ಕೂ ಹೆಚ್ಚು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ದಾಳಿಗೊಳಗಾದ ಹಡಗುಗಳನ್ನು ಅಮೆರಿಕ ಮೂಲದ ‘ಸೇಫ್‌ಸೀ ಟ್ರಾನ್ಸ್‌ಪೋರ್ಟ್ ಇಂಕ್’ ಒಡೆತನದ ಹಾಗೂ ಮಾರ್ಷಲ್ ದ್ವೀಪಗಳ ಧ್ವಜವಿದ್ದ ‘ಸೇಫ್‌ಸೀ ವಿಷ್ಣು’ ಮತ್ತು ಗ್ರೀಸ್ ಮೂಲದ ಮಾಲ್ಟಾ ಧ್ವಜವಿದ್ದ ‘ಝೆಫಿರೋಸ್’ ಎಂದು ಗುರುತಿಸಲಾಗಿದೆ. ಈ ಘಟನೆಯ ಹೊಣೆಯನ್ನು ಇರಾನ್ ಅಧಿಕೃತವಾಗಿ ಒಪ್ಪಿಕೊಂಡಿದೆ. ತನ್ನ ಜಲಾಂತರ್ಗಾಮಿ ಡ್ರೋನ್‌ಗಳು ಪರ್ಷಿಯನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳನ್ನು ಸ್ಫೋಟಿಸಿವೆ ಎಂದು ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ‘ಐಆರ್‌ಐಬಿ’ (IRIB) ಖಚಿತಪಡಿಸಿದೆ. ಇದಕ್ಕೂ ಮುನ್ನ, ಸ್ಫೋಟಕಗಳು ತುಂಬಿದ್ದ ಇರಾನ್‌ನ ‘ಆತ್ಮಹತ್ಯಾ’ ದೋಣಿಯೊಂದು ಈ ಹಡಗುಗಳಿಗೆ ಡಿಕ್ಕಿ ಹೊಡೆದಿರಬಹುದು ಎಂದು ಅಮೆರಿಕದ ಸುದ್ದಿ ಸಂಸ್ಥೆ ಸಿಎನ್‌ಎನ್ ವರದಿ ಮಾಡಿತ್ತು. ಈ ಬಗ್ಗೆಯೂ ತನಿಖೆ ಮುಂದುವರಿದಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಆತಂಕ
ವಿಶ್ವದ ಅತಿದೊಡ್ಡ ತೈಲ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ಸರಣಿ ದಾಳಿಗಳು ಆತಂಕ ಮೂಡಿಸಿವೆ. ಯುಎಇ ಕರಾವಳಿಯ ಬಳಿ, ಒಮಾನ್‌ನ ಉತ್ತರ ಭಾಗದಲ್ಲಿ ಹಾಗೂ ದುಬೈನ ವಾಯುವ್ಯ ಭಾಗದಲ್ಲಿ ಕನಿಷ್ಠ ಮೂರು ವಾಣಿಜ್ಯ ಹಡಗುಗಳ ಮೇಲೆ ಅಪರಿಚಿತ ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಯುಕೆಯ ಕಡಲ ವ್ಯಾಪಾರ ಕಾರ್ಯಾಚರಣೆ (UKMTO) ಸಂಸ್ಥೆ ತಿಳಿಸಿದೆ. ಜಲಸಂಧಿಯನ್ನು ಪ್ರವೇಶಿಸುವ ಯಾವ ಹಡಗನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಇರಾನ್ ಈ ಹಿಂದೆಯೇ ಬೆದರಿಕೆ ಹಾಕಿತ್ತು.
ಇದೀಗ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದ್ದು, ಸಮುದ್ರ ಮಾರ್ಗದ ಸಂಚಾರವು ತೀವ್ರವಾಗಿ ಕುಸಿದಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುವ ಭೀತಿ ಎದುರಾಗಿದೆ. ಇದೇ ವೇಳೆ, ಜಲಸಂಧಿಯಲ್ಲಿ ಕಣ್ಣಿಡಲು ನಿಯೋಜನೆಗೊಂಡಿದ್ದ ಇರಾನ್‌ನ 16 ಹಡಗುಗಳನ್ನು ಅಮೆರಿಕ ಸೇನೆ ನಾಶಪಡಿಸಿದೆ ಎಂದು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಹೇಳಿಕೊಂಡಿದೆ.
ಹೊರ್ಮುಜ್ ಜಲಸಂಧಿಯ ಮಹತ್ವವೇನು?
ಹೊರ್ಮುಜ್ ಜಲಸಂಧಿಯು ಇರಾನ್ ಮತ್ತು ಒಮಾನ್ ನಡುವಿನ ಕೇವಲ 55 ಕಿಲೋಮೀಟರ್ ಅಗಲದ ಕಿರಿದಾದ ಜಲಮಾರ್ಗವಾಗಿದ್ದು, ಪರ್ಷಿಯನ್ ಕೊಲ್ಲಿಯನ್ನು ಅರಬ್ಬೀ ಸಮುದ್ರಕ್ಕೆ ಸೇರಿಸುತ್ತದೆ. ಜಾಗತಿಕ ಇಂಧನ ವಲಯದ ದೃಷ್ಟಿಯಿಂದ ಇದು ಅತ್ಯಂತ ಪ್ರಮುಖವಾದ ಮತ್ತು ಜನನಿಬಿಡ ಹಡಗು ಮಾರ್ಗವಾಗಿದೆ.
ಪ್ರತಿದಿನ ಸುಮಾರು 13 ದಶಲಕ್ಷ ಬ್ಯಾರೆಲ್‌ಗಳಷ್ಟು ತೈಲ ಈ ಮಾರ್ಗದ ಮೂಲಕವೇ ಸಾಗಣೆಯಾಗುತ್ತದೆ. ಅಂದರೆ ಜಗತ್ತಿನ ಒಟ್ಟು ತೈಲ ರಫ್ತಿನ ಶೇಕಡಾ 31ರಷ್ಟು ಪಾಲು ಈ ಜಲಸಂಧಿಯ ಮೇಲೆಯೇ ಅವಲಂಬಿತವಾಗಿದೆ. ಒಂದು ವೇಳೆ ಈ ಮಾರ್ಗ ಬಂದ್ ಆದರೆ, ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳ ಪ್ರಮುಖ ಬಂದರುಗಳ ವಹಿವಾಟು ಸ್ಥಗಿತಗೊಳ್ಳಲಿದೆ. ಅಷ್ಟೇ ಅಲ್ಲದೆ, ಚೀನಾ, ಭಾರತ ಮತ್ತು ಜಪಾನ್‌ನಂತಹ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಬೃಹತ್ ರಾಷ್ಟ್ರಗಳ ಮೇಲೂ ಇದು ಭಾರಿ ಪೆಟ್ಟು ನೀಡಲಿದ್ದು, ವಿಶ್ವಾದ್ಯಂತ ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಹೆಚ್ಚಾಗಲಿದೆ.
ಇದನ್ನೂ ಓದಿ ; ಇಂದಿರಾ ಕ್ಯಾಂಟೀನ್‌ಗೂ ತಟ್ಟಿದ ಯುದ್ಧದ ಬಿಸಿ.. ಸಮಸ್ಯೆ ನಿವಾರಣೆಗೆ ಗುತ್ತಿಗೆ ಕಂಪನಿಗಳಿಂದ GBAಗೆ ಪತ್ರ



















