ಬೆಂಗಳೂರು: ಯಾವುದೇ ದಂಪತಿಗೆ ಹೆಣ್ಣು ಮಗು ಜನಿಸಿದ ನಂತರ ಮನೆಗೆ ಮಹಾಲಕ್ಷ್ಮೀ ಬಂದಿದ್ದಾಳೆ ಅಂತ ಖುಷಿಯಿಂದ ಹೇಳುತ್ತಾರೆ. ಈಗಂತೂ ಎಲ್ಲ ಅಪ್ಪಂದಿರಿಗೆ ಮಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗೆ, ಮಗಳು ಹುಟ್ಟಿದ ಕೂಡಲೇ ಅವಳ ಭವಿಷ್ಯಕ್ಕಾಗಿ ಹೂಡಿಕೆ ಆರಂಭಿಸಿದರೆ, ಅವಳಿಗೆ 21 ವರ್ಷ ತುಂಬುತ್ತಲೇ ಭವಿಷ್ಯಕ್ಕಾಗಿ ಒಳ್ಳೆಯ ಗಿಫ್ಟ್ ನೀಡಬಹುದು. ಅರೆ, ಇದ್ಯಾವುದು ಯೋಜನೆ ಅಂತೀರಾ? ಇಲ್ಲಿದೆ ಮಾಹಿತಿ.
ಹೌದು, ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1 ಸಾವಿರ ರೂಪಾಯಿ ಹೂಡಿಕೆ ಮಾಡಿದರೂ ಸಾಕು, ಮಗಳಿಗೆ 21 ವರ್ಷ ತುಂಬಿದಾಗ 5.54 ಲಕ್ಷ ರೂ. ಸಿಗುತ್ತದೆ. ಇದನ್ನು ಆಕೆಯ ಉನ್ನತ ಶಿಕ್ಷಣ ಸೇರಿ ಉಜ್ವಲ ಭವಿಷ್ಯಕ್ಕಾಗಿ ಬಳಸಿಕೊಳ್ಳಬಹುದು.
ದೇಶದ ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಮದ್ರ ಸರ್ಕಾರವು ‘ಬೇಟಿ ಬಚಾವೋ – ಬೇಟಿ ಪಡಾವೋ’ ಆಂದೋಲನದ ಭಾಗವಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅನ್ವಯ ಹೂಡಿಕೆದಾರರಿಗೆ ಶೇ.8.2ರಷ್ಟು ಬಡ್ಡಿ ನೀಡಲಾಗುತ್ತದೆ. ನೀವು ತಿಂಗಳಿಗೆ 1 ಸಾವಿರ ರೂಪಾಯಿಯನ್ನು ಹೂಡಿಕೆ ಮಾಡಿ, 15 ವರ್ಷಕ್ಕೆ ನಿಲ್ಲಿಸಿದರೂ ಒಳ್ಳೆಯ ಆದಾಯ ಸಿಗುತ್ತದೆ.
ಮಗಳ ಹೆಸರಿನಲ್ಲಿ ತಿಂಗಳಿಗೆ ನೀವು ಕಟ್ಟುವ 1 ಸಾವಿರ ರೂಪಾಯಿಯು 15 ವರ್ಷಕ್ಕೆ 1.80 ಲಕ್ಷ ರೂಪಾಯಿ ಆಗುತ್ತದೆ. ನಿಮ್ಮ ಮಗಳಿಗೆ 21 ವರ್ಷ ತುಂಬುತ್ತಲೇ ಹಣ ವಾಪಸ್ ಪಡೆದಾಗ 3.74 ಲಕ್ಷ ರೂಪಾಯಿ ಬಡ್ಡಿ ಸೇರಿ ನಿಮಗೆ 5.5 ಲಕ್ಷ ರೂಪಾಯಿ ಸಿಗುತ್ತದೆ. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದಾಗಿದೆ.