ಟೆಹ್ರಾನ್ : ಇರಾನ್ ಸರ್ವಾಧಿಕಾರಿ ಆಯತೊಲ್ಲಾ ಅಲಿ ಖಮೇನಿ ಆಡಳಿತದ ವಿರುದ್ಧದ ಜನಾಕ್ರೋಶ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಗಡಿಪಾರು ಮಾಡಲ್ಪಟ್ಟಿರುವ ರಾಜಕುಮಾರ ರೆಜಾ ಪಹ್ಲವಿ ನೀಡಿದ ಬೃಹತ್ ಪ್ರತಿಭಟನೆಯ ಕರೆಗೆ ಓಗೊಟ್ಟಿರುವ ಸಾವಿರಾರು ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಸರ್ಕಾರ ದೇಶಾದ್ಯಂತ ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದ್ದು, ದೇಶವು ಡಿಜಿಟಲ್ ಕತ್ತಲೆಯಲ್ಲಿ ಮುಳುಗಿದೆ. ಆರ್ಥಿಕ ಮುಗ್ಗಟ್ಟು ಮತ್ತು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರ ಆಕ್ರೋಶ ಈಗ ನೇರವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಡಳಿತದ ಪತನದ ಬೇಡಿಕೆಯಾಗಿ ರೂಪಾಂತರಗೊಂಡಿದೆ.
ಗುರುವಾರ ರಾತ್ರಿಯಿಂದ ಇರಾನ್‌ನಲ್ಲಿ ಅಂತರ್ಜಾಲ ಸಂಪರ್ಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಜಾಗತಿಕ ಅಂತರ್ಜಾಲ ನಿಗಾ ಸಂಸ್ಥೆ ‘ನೆಟ್‌ಬ್ಲಾಕ್ಸ್’ ದೃಢಪಡಿಸಿದೆ. ಪ್ರತಿಭಟನಾಕಾರರು ಪರಸ್ಪರ ಸಂವಹನ ನಡೆಸದಂತೆ ಮತ್ತು ದೇಶದ ಒಳಗಿನ ನೈಜ ಪರಿಸ್ಥಿತಿಯು ಜಗತ್ತಿಗೆ ತಿಳಿಯದಂತೆ ತಡೆಯಲು ಅಧಿಕಾರಿಗಳು ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಲ್ಯಾಂಡ್‌ಲೈನ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳು ಸ್ಥಗಿತಗೊಂಡಿವೆ. ಅಷ್ಟೇ ಅಲ್ಲದೆ, ತಬ್ರಿಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಪತ್ತೆಹಚ್ಚಲು ಡ್ರೋನ್ ತಂತ್ರಜ್ಞಾನವನ್ನು ಬಳಸುತ್ತಿವೆ ಎಂದು ವರದಿಯಾಗಿದೆ.
ರಾಜಕುಮಾರನ ಕರೆಗೆ ಸ್ಪಂದಿಸಿದ ಜನರು
ಇರಾನ್‌ನ ದಿವಂಗತ ಶಹಾ ಅವರ ಪುತ್ರ ರೆಜಾ ಪಹ್ಲವಿ ಅವರು ಗುರುವಾರ ರಾತ್ರಿ 8 ಗಂಟೆಗೆ ಸಾಮೂಹಿಕವಾಗಿ ಪ್ರತಿಭಟಿಸುವಂತೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಟೆಹ್ರಾನ್‌ನ ಬಹುತೇಕ ಬಡಾವಣೆಗಳಲ್ಲಿ ಜನರು ತಮ್ಮ ಮನೆಗಳ ಬಾಲ್ಕನಿಗಳಿಂದ “ಸರ್ವಾಧಿಕಾರಿಗೆ ಸಾವು” ಮತ್ತು “ಇಸ್ಲಾಮಿಕ್ ರಿಪಬ್ಲಿಕ್ ಅಂತ್ಯವಾಗಲಿ” ಎಂಬ ಘೋಷಣೆಗಳನ್ನು ಕೂಗತೊಡಗಿದರು. ರಸ್ತೆಗಳಲ್ಲಿ ಜಮಾಯಿಸಿದ ಸಾವಿರಾರು ಜನರು “ಪಹ್ಲವಿ ಮರಳಿ ಬರಲಿದ್ದಾರೆ, ಇದು ಕೊನೆಯ ಯುದ್ಧ” ಎಂದು ಹಳೆ ರಾಜಪ್ರಭುತ್ವದ ಪರವಾಗಿ ದನಿ ಎತ್ತಿದರು. ಈ ಪ್ರತಿಭಟನೆಯು ಕಳೆದ 12 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಈಗ ಹೊಸ ಸ್ವರೂಪ ಪಡೆದುಕೊಂಡಿದೆ.
ತಾರಕಕ್ಕೇರಿದ ಹಿಂಸಾಚಾರ
ಆರ್ಥಿಕ ಸಂಕಷ್ಟ, ಉದ್ಯೋಗದ ಕೊರತೆ ಮತ್ತು ಜೀವನವೆಚ್ಚ ಹೆಚ್ಚಾಗಿರುವುದನ್ನು ವಿರೋಧಿಸಿ ಆರಂಭವಾದ ಈ ಹೋರಾಟದಲ್ಲಿ ಈವರೆಗೆ ಕನಿಷ್ಠ 39 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಂಸ್ಥೆಗಳು ತಿಳಿಸಿವೆ. ಭದ್ರತಾ ಪಡೆಗಳ ದಮನಕಾರಿ ನೀತಿಯಿಂದಾಗಿ ಸುಮಾರು 2,260ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಅನೇಕ ಕಡೆ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಇಷ್ಟೆಲ್ಲಾ ಸಾವು-ನೋವುಗಳು ಸಂಭವಿಸುತ್ತಿದ್ದರೂ, ಸರ್ಕಾರಿ ಮಾಧ್ಯಮಗಳು ಮಾತ್ರ ಪ್ರತಿಭಟನೆಯ ತೀವ್ರತೆಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದು, ಕೇವಲ ಭದ್ರತಾ ಸಿಬ್ಬಂದಿಯ ಗಾಯದ ಬಗ್ಗೆ ಮಾತ್ರ ವರದಿ ಮಾಡುತ್ತಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅಮೆರಿಕ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಾಯಕತ್ವಕ್ಕೆ ಕಠಿಣ ಎಚ್ಚರಿಕೆ ನೀಡಿದ್ದು, “ಪ್ರತಿಭಟನಾಕಾರರ ಹತ್ಯೆ ನಡೆದರೆ ಅಮೆರಿಕ ಸುಮ್ಮನಿರುವುದಿಲ್ಲ, ನಾವು ಇರಾನ್ ಮೇಲೆ ಅತ್ಯಂತ ತೀವ್ರವಾದ ದಾಳಿ ನಡೆಸುತ್ತೇವೆ” ಎಂದು ಗುಡುಗಿದ್ದಾರೆ. ಇದೇ ವೇಳೆ ರಾಜಕುಮಾರ ಪಹ್ಲವಿ ಅವರು ಟ್ರಂಪ್ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದು, ಐರೋಪ್ಯ ರಾಷ್ಟ್ರಗಳೂ ಇರಾನ್ ಪರವಾಗಿ ದನಿ ಎತ್ತುವಂತೆ ಮತ್ತು ಮೌನ ಮುರಿಯುವಂತೆ ಮನವಿ ಮಾಡಿದ್ದಾರೆ. ಪ್ರತಿಭಟನೆಯ ಕಿಚ್ಚು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇರಾನ್ ಹಾಗೂ ಖಮೇನಿ ಅವರ ಮುಂದಿನ ನಡೆ ಜಾಗತಿಕ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ತುಮಕೂರು | ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಬರುವಾಗ ಅಪಘಾತ.. ನಾಲ್ವರು ಭಕ್ತರು ಸಾವು, 7 ಜನರಿಗೆ ಗಾಯ!



















