ಬೆಂಗಳೂರು: ಟರ್ಮ್ ಇನ್ಶೂರೆನ್ಸ್, ಅಪಘಾತ ವಿಮೆ, ಜೀವ ವಿಮೆ ಸೇರಿ ಹಲವು ವಿಮೆಗಳನ್ನು ಮಾಡಿಸಿರುತ್ತಾರೆ. ಆದರೆ, ವಿಮೆ ಮಾಡಿಸಿದ ಪಾಲಿಸಿದಾರ ಹಾಗೂ ನಾಮಿನಿಯು ತೀರಿಕೊಂಡರೆ, ಅದರ ಕ್ಲೇಮ್ ಮೊತ್ತ ಯಾರಿಗೆ ಸಿಗುತ್ತದೆ ಎಂಬ ಗೊಂದಲ ಕಾಡುತ್ತದೆ. ಹಾಗಾಗಿ, ಪಾಲಿಸಿದಾರ ತೀರಿಕೊಂಡು, ಆ ವಿಮಾ ಮೊತ್ತವನ್ನು ಕ್ಲೇಮ್ ಮಾಡುವ ಮೊದಲೇ ನಾಮಿನಿಯೂ ತೀರಿಕೊಂಡರೆ, ಕ್ಲೇಮ್ ಹಣ ಯಾರಿಗೆ ಲಭಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.
ಅಕಸ್ಮಾತ್, ವಿಮೆ ಮಾಡಿಸಿದ ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟಾಗ, ಕಾನೂನಿನ ಪ್ರಕಾರ ಪಾಲಿಸಿದಾರನ ವಾರಸುದಾರರಿಗೆ ಇನ್ಷೂರೆನ್ಸ್ ಹಣ ನೀಡಲಾಗುತ್ತದೆ. ಹಾಗೊಂದು ವೇಳೆ, ಪಾಲಿಸಿದಾರ ಉಯಿಲ್ ಅಥವಾ ವಿಲ್ ಬರೆದಿಟ್ಟಿದ್ದರೆ ಅದರ ಪ್ರಕಾರ ಆ ವ್ಯಕ್ತಿಗೆ ಇನ್ಷೂರೆನ್ಸ್ ಹಣ ನೀಡಬೆಕಾಗುತ್ತದೆ.
ಪಾಲಿಸಿ ಮಾಡಿಸಿದವರು ಒಂದು ವೇಳೆ ವಿಲ್ ಬರೆಯದೆ ಇದ್ದರೆ, ಭಾರತೀಯ ವಾರಸುದಾರಿಕೆ ಕಾಯ್ದೆ ಅಡಿ ಇರುವ ನಿಯಮಗಳು ಅನ್ವಯ ಆಗುತ್ತವೆ. ಮೃತರ ಕುಟುಂಬದ ಸದಸ್ಯರಾದ ಪತಿ ಅಥವಾ ಪತ್ನಿ, ಮಕ್ಕಳು, ಪೋಷಕರಿಗೆ ವಿಮೆಯ ಮೊತ್ತವನ್ನು ಹಂಚಿಕೆ ಮಾಡಲಾಗುತ್ತದೆ.
ವಿಮೆಯ ಮೊತ್ತವು ಯಾರಿಗೆ ಸಿಗಬೇಕು ಎಂಬ ಕುರಿತು ಗೊಂದಲ, ಕಾನೂನು ತೊಡಕುಗಳು ಎದುರಾಗುವ ಕಾರಣ ಪಾಲಿಸಿದಾರರು ಮೊದಲೇ ಒಬ್ಬರಿಗಿಂತ ಹೆಚ್ಚಿನ ಜನರನ್ನು ನಾಮಿನಿಗಳನ್ನಾಗಿ ಮಾಡುವುದು ಅತ್ಯಗತ್ಯ. ಹೆಂಡತಿ, ಮಕ್ಕಳು, ಅಥವಾ ಪೋಷಕರನ್ನೂ ನಾಮಿನಿಗಳಾಗಿ ಹೆಸರಿಸಬಹುದು. ಯಾವ ನಾಮಿನಿಗೆ ಎಷ್ಟು ಪ್ರಮಾಣದ ಪಾಲು ಹೋಗಬೇಕು ಎಂಬುದನ್ನೂ ನಿರ್ದಿಷ್ಟಪಡಿಸಬಹುದು. ಉದಾಹರಣೆಗೆ, ಇನ್ಷೂರೆನ್ಸ್ ಹಣದಲ್ಲಿ ಶೇ. 50ರಷ್ಟು ಮೊತ್ತವು ಪತ್ನಿಗೆ, ಶೇ. 25 ಮತ್ತು ಶೇ. 25ರಷ್ಟು ಹಣವು ಇಬ್ಬರು ಮಕ್ಕಳಿಗೆ ನೀಡಬೇಕು ಎಂಬುದನ್ನು ಮೊದಲೇ ನಮೂದಿಸಬಹುದು.