ಬೆಂಗಳೂರು: ಕನ್ನಡತಿ ಶ್ರೇಯಾಂಕ ಪಾಟೀಲ್ ಅವರು ಗಾಯದ ಕಾರಣ ಶುಕ್ರವಾರ ಆರಂಭವಾದ 2025ರ ಮಹಿಳಾ ಪ್ರೀಮಿಯರ್ ಲೀಗ್ (WPL 2025) ಟೂರ್ನಿಯಿಂದ ಹೊರ ಬಿದ್ದಿದ್ದಾರ. ಅವರ ಸ್ಥಾನಕ್ಕೆ ಸ್ನೇಹಾ ರಾಣಾ ಬಂದಿದ್ದು, ಕಳೆದ 3-4 ದಿನಗಳಿಂದ ಆರ್‌ಸಿಬಿ ಕ್ಯಾಂಪ್‌ನಲ್ಲಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಈ ಕುರಿತು ವರದಿ ಮಾಡಿದ್ದು, ಹರಾಜಿನಲ್ಲಿ ಸ್ನೇಹಾ ರಾಣಾ ಅನ್‌ಸೋಲ್ಡ್ ಆಗಿದ್ದರೂ ಇದೀಗ ಆರ್ಸಿಬಿ ಸೇರುವಂತಾಗಿದೆ. ಟೂರ್ನಿಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೊಗಳಲ್ಲಿ ಶ್ರೇಯಾಂಕ ಪಾಟೀಲ್ ಕಾಣಿಸಿಕೊಂಡಿದ್ದರು. ಆದರೆ, ಶುಕ್ರವಾರ ವಡೋದರದ ಕೊಟಂಬಿ ಕ್ರೀಡಾಂಗಣದಲ್ಲಿ ನಡೆದಿದ್ದ ಗುಜರಾತ್ ಜಯಂಟ್ಸ್ ವಿರುದ್ದದ ಪಂದ್ಯದಲ್ಲಿ ಅವರು ಆಡಿರಲಿಲ್ಲ.
ಬಳಿಕ ಶ್ರೇಯಾಂಕ ಪಾಟೀಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನ ಹೃದಯ ಒಡೆದಿದೆ ಆದರೆ, ಮತ್ತೆ ನಾನು ಹಾರುತ್ತೇನೆ,” ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಗಾಯದ ಸಮಸ್ಯೆ ಎದುರಿಸಿದ್ದ ಶ್ರೇಯಾಂಕ ಪಾಟೀಲ್
2024ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಾಂಕ ಪಾಟೀಲ್ ಗಮನಾರ್ಹ ಪ್ರದರ್ಶನ ತೋರಿದ್ದರು. ಆ ಮೂಲಕ ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು.
ನವದೆಹಲಿಯಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್‌ನಲ್ಲಿ ಶ್ರೇಯಾಂಕ ಪಾಟೀಲ್ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಬಳಿಕ ಅವರು ಬೆರಳಿನ ಗಾಯದಿಂದಾಗಿ ಹಲವು ಪಂದ್ಯಗಳಿಂದ ಹೊರಗುಳಿದಿದ್ದರು. ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿಯೂ ಗಾಯಕ್ಕೆ ತುತ್ತಾಗಿದ್ದರು. ಆ ಮೂಲಕ ಅವರು ಇನ್ನುಳಿದ ಪಂದ್ಯಗಳಿಂದ ಹೊರಬಿದ್ದಿದ್ದರು.
ಪ್ರಸಕ್ತ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗಾಗಲೇ ಗಾಯದ ಸಮಸ್ಯೆಯಿಂದ ಸೋಫಿ ಮಾಲಿನಕ್ಸ್ ಹಾಗೂ ಆಶಾ ಸೋಭಾನ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇದೀಗ ಶ್ರೇಯಾಂಕ ಪಾಟೀಲ್ ಕೂಡ ಟೂರ್ನಿಯಿಂದ ಹೊರಬಿದ್ದರುವುದರಿಂದ ಆರ್‌ಸಿಬಿ ತನ್ನ ಪ್ರಮುಖ ಸ್ಪಿನ್ನರ್‌ಗಳನ್ನು ಕಳೆದುಕೊಂಡಂತಾಗಿದೆ. 2024ರ ವಿಶ್ವಕಪ್ ಟೂರ್ನಿಯ ವಿಜೇತ ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿಯಾ ಡಿವೈನ್ ಹಾಗೂ ಕೇಟ್ ಕ್ರಾಸ್ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.