ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವ ಮಾಹಿತಿ ನಿಖರವಾಗಿರಬೇಕು. ಈ ಮೂಲಕ ಇ.ಡಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ತಿಳಿಸಿದೆ.
ಈ ಬಗ್ಗೆ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಮಾತನಾಡಿ, ಇ.ಡಿ ವಾಸ್ತವ ಅಂಶಗಳನ್ನು ನೀಡುವಾಗ ದಾರಿತಪ್ಪಿಸುವ ರೀತಿಯಲ್ಲಿ ಅಥವಾ ಮಾನಹಾನಿ ಮಾಡುವ ರೀತಿಯಲ್ಲಿರಬಾರದು. ಒಂದು ವೇಳೆ ಹಾಗೆ ಮಾಡಿದರೆ ಅದು ಸಂಸ್ಥೆಯ ಘನತೆಗೆ ಧಕ್ಕೆ ಬರುತ್ತದೆ. ಜೊತೆಗೆ ಸಂಬಂಧಪಟ್ಟ ವ್ಯಕ್ತಿಯ ಘನತೆಯ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಇ.ಡಿಯಂತಹ ತನಿಖಾ ಸಂಸ್ಥೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಹಾಗೂ ನ್ಯಾಯಯುತ, ಸಮಂಜಸ ಪ್ರಕ್ರಿಯೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುತ್ತದೆ. ಅದಲ್ಲದೇ ಇ.ಡಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮಾಹಿತಿಯೂ ನಿಖರವಾಗಿರಬೇಕು. ದಾರಿತಪ್ಪಿಸದ ಹಾಗೂ ರೋಚಕತೆಯಿಂದ ಮುಕ್ತವಾಗಿರಬೇಕು. ರಾಜಕೀಯವಾಗಿ ಪಕ್ಷಪಾತ ಮಾಡುವ ಉದ್ದೇಶದಿಂದ ಯಾವುದೇ ವಿಷಯವನ್ನು ಹಂಚಿಕೊಳ್ಳುವುದರಿಂದ ಸಂಸ್ಥೆಯ ಸಮಗ್ರತೆ ಹಾಳಾಗುತ್ತದೆ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರು ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯ ತಿರಸ್ಕರಿಸಿ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಬಾನ್ಸುರಿ ಸ್ವರಾಜ್ ಅವರು ಜೈನ್ ಅವರ ಮನೆಯಿಂದ ಇ.ಡಿಯು 1.8 ಕೆಜಿ ಚಿನ್ನ, 133 ಚಿನ್ನದ ನಾಣ್ಯಗಳು ಮತ್ತು 3 ಕೋಟಿ ರೂ. ನಗದು ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಬಾನ್ಸುರಿ ಅವರ ವಿರುದ್ಧ ಜೈನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇ.ಡಿಯು ತನ್ನ ಎಕ್ಸ್ ಖಾತೆಯಲ್ಲಿ, 2022ರ ಜೂ.6ರಂದು ಪಿಎಂಎಲ್‌ಎ ಅಡಿಯಲ್ಲಿ ಸತ್ಯೇಂದರ್ ಜೈನ್ ಮತ್ತು ಇತರರ ಮನೆಯಲ್ಲಿ ಶೋಧ ನಡೆಸಿದೆ. ಈ ವೇಳೆ ವಿವಿಧ ಶಂಕಾಸ್ಪದ ದಾಖಲೆಗಳು, ಡಿಜಿಟಲ್ ದಾಖಲೆಗಳು ಸೇರಿದಂತೆ 2.85 ಕೋಟಿ ರೂ. ನಗದು ಮತು ಒಟ್ಟು 1.80 ಕೆಜಿ ತೂಕದ 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬರೆದುಕೊಂಡಿತ್ತು.
ಈ ಕುರಿತು ಜೈನ್ ಅವರು ಮಾತನಾಡಿ, ನಮ್ಮ ಮನೆಯಿಂದ ಇ.ಡಿಯು ಯಾವುದೇ ನಗದು ಅಥವಾ ಚಿನ್ನವನ್ನು ವಶಪಡಿಸಿಕೊಂಡಿಲ್ಲ. ಇ.ಡಿ ನಡೆಸಿರುವ ಪಂಚನಾಮೆಯಲ್ಲಿಯೂ ಈ ಅಂಶ ಸ್ಪಷ್ಟವಾಗಿ ದಾಖಲಾಗಿದೆ. ಆದಾಗ್ಯೂ ಬಾನ್ಸುರಿ ಸ್ವರಾಜ್ ಅವರು ನಮ್ಮ ಮನೆಯಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ ಎಂದು ಆಪಾದಿಸಿದ್ದರು.
ಪ್ರಕರಣವನ್ನು ಪರಿಗಣಿಸಿದ ನ್ಯಾಯಾಧೀಶರು, ಇ.ಡಿ ಹಂಚಿಕೊಂಡಿರುವ ಟ್ವೀಟ್‌ನ್ನು ಗಮನಿಸಿದರೆ ನಿಜಕ್ಕೂ ಜೈನ್ ಅವರ ಮನೆಯಿಂದ ಹಣ ವಶಪಡಿಸಿಕೊಂಡಿದ್ದಾರೆ ಎನ್ನಿಸುತ್ತದೆ. ಹೀಗಾಗಿ ಬಾನ್ಸುರಿ ಸ್ವರಾಜ್ ವಿರುದ್ಧ ಜೈನ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದೇ ವೇಳೆ ನ್ಯಾಯಾಧೀಶರು, ಇಂತಹ ವಿಷಯದಲ್ಲಿ ಜಾಗೃತಿ ವಹಿಸಿ ಎಂದು ಇ.ಡಿಗೆ ಎಚ್ಚರಿಕೆ ನೀಡಿದ್ದಾರೆ.



















