ವಾಷಿಂಗ್ಟನ್: 1980ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಕಹುಟಾ ಪರಮಾಣು ಸ್ಥಾವರದ ಮೇಲೆ ಬಾಂಬ್ ದಾಳಿ ನಡೆಸಲು ಭಾರತ ಮತ್ತು ಇಸ್ರೇಲ್ ರೂಪಿಸಿದ್ದ ಜಂಟಿ ರಹಸ್ಯ ಕಾರ್ಯಾಚರಣೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅನುಮೋದನೆ ನೀಡಿರಲಿಲ್ಲ ಎಂದು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದ ಪರಮಾಣು ಮಹತ್ವಾಕಾಂಕ್ಷೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಈ ಯೋಜನೆ ರೂಪಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಾರ್ಲೋ, ಈ ಕಾರ್ಯಾಚರಣೆಗೆ ಅಂದಿನ ಭಾರತ ಸರ್ಕಾರ ಅನುಮೋದನೆ ನೀಡದಿರುವುದು “ನಾಚಿಕೆಗೇಡಿನ ಸಂಗತಿ” ಎಂದು ಹೇಳಿದ್ದಾರೆ. “ಇಂದಿರಾ ಗಾಂಧಿ ಅವರು ಆ ಯೋಜನೆಗೆ ಒಪ್ಪಿಗೆ ನೀಡದಿರುವುದು ನಿಜಕ್ಕೂ ವಿಷಾದನೀಯ. ಒಂದು ವೇಳೆ ಆ ದಾಳಿ ನಡೆದಿದ್ದರೆ, ಅದು ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತಿತ್ತು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
1980ರ ದಶಕದಲ್ಲಿ ಪಾಕಿಸ್ತಾನದ ರಹಸ್ಯ ಪರಮಾಣು ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿದ್ದ ಸಿಐಎ ಅಧಿಕಾರಿಯಾಗಿದ್ದ ಬಾರ್ಲೋ, ಈ ಯೋಜನೆಯ ಬಗ್ಗೆ ಗುಪ್ತಚರ ವಲಯಗಳು ಮಾಹಿತಿ ನೀಡಿದ್ದವು. ಆದರೆ, 1982 ರಿಂದ 1985ರ ಅವಧಿಯಲ್ಲಿ ತಾವು ಸರ್ಕಾರಿ ಸೇವೆಯಿಂದ ಹೊರಗಿದ್ದ ಕಾರಣ, ಈ ಯೋಜನೆಯಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವರದಿಗಳ ಪ್ರಕಾರ, ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಮತ್ತು ವಿಶೇಷವಾಗಿ ಇರಾನ್‌ಗೆ ಮಾರಾಟ ಮಾಡುವುದನ್ನು ತಡೆಯಲು ಭಾರತ ಮತ್ತು ಇಸ್ರೇಲ್ ಈ ಪೂರ್ವಭಾವಿ ವಾಯುದಾಳಿಯನ್ನು ಯೋಜಿಸಿದ್ದವು.
ಆದರೆ, ಅಂದಿನ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಆಡಳಿತವು ಇಂತಹ ಯಾವುದೇ ದಾಳಿಯನ್ನು ಬಲವಾಗಿ ವಿರೋಧಿಸುತ್ತಿತ್ತು ಎಂದು ಬಾರ್ಲೋ ಹೇಳಿದ್ದಾರೆ. ಏಕೆಂದರೆ, ಅಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಅಮೆರಿಕ ನಡೆಸುತ್ತಿದ್ದ ರಹಸ್ಯ ಯುದ್ಧಕ್ಕೆ ಇದು ಅಡ್ಡಿಯಾಗುವ ಸಂಭವವಿತ್ತು. ಪಾಕಿಸ್ತಾನವು ಅಫ್ಘಾನಿಸ್ತಾನದ ಮುಜಾಹಿದೀನ್‌ಗಳಿಗೆ ನೀಡುತ್ತಿದ್ದ ಬೆಂಬಲವನ್ನು ಬಳಸಿಕೊಂಡು ಅಮೆರಿಕದ ಮೇಲೆ ಒತ್ತಡ ಹೇರಿತ್ತು. “ನೀವು ನೆರವು ನಿಲ್ಲಿಸಿದರೆ, ನಾವು ಮುಜಾಹಿದೀನ್‌ಗಳನ್ನು ಬೆಂಬಲಿಸುವುದಿಲ್ಲ,” ಎಂದು ಪಾಕಿಸ್ತಾನದ ಪರಮಾಣು ಶಕ್ತಿ ಆಯೋಗದ ಮಾಜಿ ಮುಖ್ಯಸ್ಥ ಮುನೀರ್ ಅಹ್ಮದ್ ಖಾನ್ ಅಮೆರಿಕದ ಶಾಸಕರಿಗೆ ಎಚ್ಚರಿಕೆ ನೀಡಿದ್ದರು ಎಂದು ಬಾರ್ಲೋ ವಿವರಿಸಿದ್ದಾರೆ.
ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಪಿತಾಮಹ ಎ.ಕ್ಯೂ. ಖಾನ್ ನೇತೃತ್ವದಲ್ಲಿ ಸ್ಥಾಪನೆಯಾದ ಕಹುಟಾ ಸ್ಥಾವರವು ನಂತರ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಕೇಂದ್ರಬಿಂದುವಾಯಿತು ಮತ್ತು 1998ರಲ್ಲಿ ಪಾಕಿಸ್ತಾನ ತನ್ನ ಮೊದಲ ಪರಮಾಣು ಪರೀಕ್ಷೆಗಳನ್ನು ನಡೆಸಲು ಕಾರಣವಾಯಿತು.
ಇದನ್ನೂ ಓದಿ:ವಿಶ್ವದ ಅತಿದೊಡ್ಡ ಜೇಡರ ಬಲೆ ಪತ್ತೆ: 1.10 ಲಕ್ಷಕ್ಕೂ ಹೆಚ್ಚು ಜೀವಿಗಳ ವಾಸ !



















