ಬೆಂಗಳೂರು: ಪ್ರತಿ ತಿಂಗಳು ಹಣಕಾಸು ನಿಯಮಗಳು ಬದಲಾಗುತ್ತಲೇ ಇರುತ್ತವೆ. ಬ್ಯಾಂಕ್ ಗಳು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ನೀತಿಗಳು ಬದಲಾಗುತ್ತಿರುತ್ತವೆ. ಜುಲೈ 1ರಿಂದಲೂ ಹಲವು ಹಣಕಾಸು ನಿಯಮಗಳು ಬದಲಾಗಿವೆ. ಇವುಗಳನ್ನು ತಿಳಿದುಕೊಂಡರೆ ಮಾತ್ರ, ವಿವಿಧ ಪ್ರಯೋಜನಗಳು ಸಿಗುತ್ತವೆ. ಹೆಚ್ಚುವರಿ ಶುಲ್ಕಗಳ ಬಗ್ಗೆಯೂ ಮಾಹಿತಿ ಇರುತ್ತದೆ. ಹಾಗಾದ್ರೆ, ಇಂದಿನಿಂದ ಯಾವೆಲ್ಲ ನಿಯಮಗಳು ಬದಲಾಗಿವೆ? ಇಲ್ಲಿದೆ ಮಾಹಿತಿ.
- ಎಟಿಎಂ ವಹಿವಾಟು ಶುಲ್ಕ ಹೆಚ್ಚಳ
ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಎಟಿಎಂ ಶುಲ್ಕಗಳನ್ನು ಅನ್ವಯಿಸಲಿದೆ. ಮಾಸಿಕ 3 ಉಚಿತ ಎಟಿಎಂ ವಹಿವಾಟುಗಳ ನಂತರ ಪ್ರತಿ ನಗದು ಹಿಂಪಡೆಯುವಿಕೆಗೆ 23 ರೂ. ಶುಲ್ಕ ವಿಧಿಸುತ್ತದೆ. ಬ್ಯಾಲೆನ್ಸ್ ಚೆಕ್ ಮಾಡಲು ಎಂಟೂವರೆ ರೂ. ಶುಲ್ಕ ವಿಧಿಸುತ್ತದೆ. - ಕ್ರೆಡಿಟ್ ಕಾರ್ಡ್, ವ್ಯಾಲೆಟ್ ಗಳಿಗೆ ಹೊಸ ಶುಲ್ಕ
ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೇಲೆ ಹೊಸ ಶುಲ್ಕಗಳನ್ನು ಜಾರಿಗೆ ತಂದಿದೆ. ಗೇಮಿಂಗ್ ಅಪ್ಲಿಕೇಶನ್ಗಳಲ್ಲಿ (ಡ್ರೀಮ್ 11, MPL) 10 ಸಾವಿರ ರೂ.ಗಿಂತ ಹೆಚ್ಚಿನ ಖರ್ಚಿಗೆ 1% ಶುಲ್ಕ ವಿಧಿಸುತ್ತದೆ. ಡಿಜಿಟಲ್ ವ್ಯಾಲೆಟ್ಗಳಲ್ಲಿ (ಪೇಟಿಎಂ, ಮೊಬಿಕ್ವಿಕ್) ₹10 ಸಾವಿರ ಲೋಡ್ ಗೆ 1% ಶುಲ್ಕ ಇರಲಿದೆ. ಯುಟಿಲಿಟಿ ಬಿಲ್ ಗಳಿಗೆ (ವಿದ್ಯುತ್, ನೀರು) 50 ಸಾವಿರ ರೂ.ಗಿಂತ ಹೆಚ್ಚಿನ ಪಾವತಿಗೆ 1% ಶುಲ್ಕ ವಿಧಿಸುತ್ತದೆ. - ರೈಲು ಟಿಕೆಟ್ ಗಳು ದುಬಾರಿ
ಜುಲೈ 1, 2025 ರಿಂದ ರೈಲಿನಲ್ಲಿ ಪ್ರಯಾಣಿಸುವವರು ಎರಡು ಹೊಸ ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದಾರೆ. ಮೊದಲನೆಯದಾಗಿ, ತತ್ಕಾಲ್ ಟಿಕೆಟ್ ಬುಕ್ ಮಾಡಲು ಅವರಿಗೆ ಇ-ಆಧಾರ್ ದೃಢೀಕರಣದ ಅಗತ್ಯ ಇರುತ್ತದೆ. ಎರಡನೆಯದಾಗಿ ಟಿಕೆಟ್ ಸ್ವಲ್ಪ ದುಬಾರಿ ಆಗಬಹುದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ ಎಸಿ ಅಲ್ಲದ ವರ್ಗದ ದರವನ್ನು ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಿಸಲಾಗಿದೆ. ಇನ್ನು ಎಸಿ ತರಗತಿಗಳಲ್ಲಿ ಪ್ರಯಾಣಿಸುವ ಟಿಕೆಟ್ಗಳು ಪ್ರತಿ ಕಿ.ಮೀ.ಗೆ 2 ಪೈಸೆ ದುಬಾರಿಯಾಗಲಿವೆ. 500 ಕಿ.ಮೀ.ವರೆಗಿನ ಎರಡನೇ ದರ್ಜೆಯ ಪ್ರಯಾಣ ದರವು ಬದಲಾಗದೇ ಉಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 500 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ, ದರಗಳನ್ನು ಪ್ರತಿ ಕಿ.ಮೀ.ಗೆ ಅರ್ಧ ಪೈಸೆ ಹೆಚ್ಚಿಸಬಹುದು. - ಹೊಸ ಪ್ಯಾನ್ ಕಾರ್ಡ್ ಅರ್ಜಿಗಳಿಗೆ ಈಗ ಆಧಾರ್ ಪರಿಶೀಲನೆ ಅಗತ್ಯ
ಜುಲೈ 1, 2025 ರಿಂದ ಹೊಸ ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಪ್ರಕಟಣೆ ತಿಳಿಸಿದೆ. ಇದರರ್ಥ ಜುಲೈ 1 ರ ನಂತರ ಪ್ಯಾನ್ ಗೆ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಯು ಮಾನ್ಯವಾದ ಆಧಾರ್ ಕಾರ್ಡ್ ಸಂಖ್ಯೆಯನ್ನು ಹೊಂದಿರಬೇಕು. ಇದು ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಏಕೈಕ ಪರಿಶೀಲನಾ ದೃಢೀಕರಣವಾಗಿ ಕಾರ್ಯನಿರ್ವಹಿಸುತ್ತದೆ. ಸಮಾನಾಂತರವಾಗಿ, ಅಸ್ತಿತ್ವದಲ್ಲಿರುವ ಪ್ಯಾನ್ ಹೊಂದಿರುವವರು ಡಿಸೆಂಬರ್ 31, 2025 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.



















