ಬುಲವಾಯೊ: ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್ 2026ರ ಕಣದಲ್ಲಿ ಕ್ರೀಡಾ ಸ್ಫೂರ್ತಿಗಿಂತ ರಾಜತಾಂತ್ರಿಕ ಬಿಕ್ಕಟ್ಟಿನ ಕಿಡಿಯೇ ಜೋರಾಗಿ ಕೇಳಿಬರುತ್ತಿದೆ. ಶನಿವಾರ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದ ಟಾಸ್ ವೇಳೆ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ, ಎದುರಾಳಿ ತಂಡದ ನಾಯಕ ಜವಾದ್ ಅಬ್ರಾರ್ ಅವರಿಗೆ ಹಸ್ತಲಾಘವ (Handshake) ನೀಡಲು ನಿರಾಕರಿಸುವ ಮೂಲಕ ಕಟುವಾದ ಸಂದೇಶ ರವಾನಿಸಿದ್ದಾರೆ. ಈ ಘಟನೆಯು ಕ್ರೀಡಾ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಟಾಸ್ ಗೆದ್ದ ಬಾಂಗ್ಲಾ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಸಾಮಾನ್ಯವಾಗಿ ಪಂದ್ಯದ ಮೊದಲು ಉಭಯ ತಂಡಗಳ ನಾಯಕರು ಕೈಕುಲುಕಿ ಶುಭ ಹಾರೈಸುವ ಸಂಪ್ರದಾಯವಿದೆ. ಆದರೆ, ಮ್ಹಾತ್ರೆ ಮತ್ತು ಅಬ್ರಾರ್ ಪರಸ್ಪರ ಮುಖವನ್ನೂ ನೋಡದೆ, ಯಾವುದೇ ಸಂವಹನ ನಡೆಸದೆ ಮೌನವಾಗಿ ನಿರ್ಗಮಿಸಿದರು. ಕೇವಲ ಟಾಸ್ ವೇಳೆಯಷ್ಟೇ ಅಲ್ಲದೆ, ರಾಷ್ಟ್ರಗೀತೆ ಮುಗಿದ ನಂತರವೂ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡದೆ ಮೈದಾನಕ್ಕೆ ಇಳಿದಿದ್ದು ಗಂಭೀರ ಪರಿಸ್ಥಿತಿಗೆ ಸಾಕ್ಷಿಯಾಯಿತು.
ಪಾಕಿಸ್ತಾನಕ್ಕೆ ನೀಡಿದ ಚಿಕಿತ್ಸೆಯೇ ಬಾಂಗ್ಲಾಕ್ಕೂ ಅನ್ವಯ?
ಭಾರತ ತಂಡದ ಈ ನಡವಳಿಕೆಯ ಹಿಂದೆ ಬಲವಾದ ರಾಜಕೀಯ ಕಾರಣಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್ ಮೇಲೆ ನಡೆದ ಉಗ್ರರ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತ ಇಂತಹುದೇ ಕಠಿಣ ನಿಲುವು ತಳೆದಿತ್ತು. ಪಾಕಿಸ್ತಾನದ ಯಾವುದೇ ತಂಡದೊಂದಿಗೆ ಹಸ್ತಲಾಘವ ಮಾಡಬಾರದು ಮತ್ತು ಸಂವಾದ ನಡೆಸಬಾರದು ಎಂಬ ಭಾರತೀಯ ಕ್ರಿಕೆಟ್ ತಂಡದ ನಿರ್ಧಾರ ಇದೀಗ ಬಾಂಗ್ಲಾದೇಶಕ್ಕೂ ವಿಸ್ತರಣೆಯಾದಂತೆ ಕಾಣುತ್ತಿದೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಸತತ ದಾಳಿ ಮತ್ತು ಹಿಂಸಾಚಾರದ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಭಾರತ ಈ ಹಂತಕ್ಕೆ ಮುಂದಾಗಿದೆ ಎನ್ನಲಾಗಿದೆ.
ಐಪಿಎಲ್ ಮತ್ತು ವಿಶ್ವಕಪ್ ಮೇಲೂ ಪರಿಣಾಮ:
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧವು ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಬಿಸಿಸಿಐ ಸೂಚನೆಯಂತೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಬಾಂಗ್ಲಾ ಸರ್ಕಾರ ತನ್ನ ದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿದೆ. ಅಷ್ಟೇ ಅಲ್ಲದೆ, 2026ರ ಟಿ20 ವಿಶ್ವಕಪ್ ವೇಳೆ ತಮ್ಮ ತಂಡವನ್ನು ಭಾರತಕ್ಕೆ ಕಳುಹಿಸಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಹಿಂದೇಟು ಹಾಕುತ್ತಿದ್ದು, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿದೆ.
ಇದನ್ನೂ ಓದಿ: ಅಂಡರ್-19 ವಿಶ್ವಕಪ್ | 14ರ ಹರೆಯದಲ್ಲೇ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ; ಕೊಹ್ಲಿ ದಾಖಲೆ ಉಡೀಸ್!



















