ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ದಾಳಿಯ ವೇಳೆ ಟರ್ಕಿ ಹಾಗೂ ಅಜರ್ ಬೈಜಾನ್ ಪಾಕಿಸ್ತಾನಕ್ಕೆ ಬೆಂಬಲಿಸಿದವು. ಇಸ್ಲಾಮಿಕ್ ದೇಶ, ವ್ಯವಹಾರ ಸೇರಿ ಹಲವು ದೃಷ್ಟಿಯಿಂದ ಪಾಕಿಸ್ತಾನಕ್ಕೆ ಇವೆರಡೂ ದೇಶಗಳು ಶಸ್ತ್ರಾಸ್ತ್ರಗಳನ್ನು ನೀಡಿದವು. ಡ್ರೋನ್ ಗಳನ್ನು ಸರಬರಾಜು ಮಾಡಿದವು. ಆದರೆ, ಇದಕ್ಕೆ ಪ್ರತಿಯಾಗಿ ಭಾರತೀಯರು ತಿರುಗೇಟು ನೀಡಿದ್ದಾರೆ. ಎರಡೂ ದೇಶಗಳಿಗೆ ಪ್ರವಾಸ ರದ್ದುಗೊಳಿಸುವ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.
ಹೌದು, ಟರ್ಕಿ ಹಾಗೂ ಅಜರ್ ಬೈಜಾನ್ ಗೆ ತೆರಳಬೇಕಿದ್ದ ಭಾರತೀಯರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಈಸ್ ಮೈ ಟ್ರಿಪ್ ಸಹ ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಎರಡೂ ದೇಶಗಳಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ.
“ಟರ್ಕಿಗೆ ತೆರಳಬೇಕಿದ್ದ ಶೇ.22ರಷ್ಟು ಭಾರತೀಯರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇನ್ನು ಅಜರ್ ಬೈಜಾನ್ ಗೆ ತೆರಳಬೇಕಿದ್ದ ಶೇ.30ರಷ್ಟು ಪ್ರವಾಸಿಗರು ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದಾರೆ” ಎಂದು ಪ್ರಶಾಂತ್ ಪಿಟ್ಟಿ ತಿಳಿಸಿದ್ದಾರೆ. ಕಳೆದ ವರ್ಷ 3.8 ಲಕ್ಷ ಭಾರತೀಯರು ಟರ್ಕಿ ಹಾಗೂ ಅಜರ್ ಬೈಜಾನ್ ಗೆ ತೆರಳಿದ್ದರು.
ಈಸ್ ಮೈ ಟ್ರಿಪ್ ಮಾತ್ರವಲ್ಲ, ಮೇಕ್ ಮೈ ಟ್ರಿಪ್ ಮೂಲಕ ಟಿಕೆಟ್ ಬುಕ್ ಮಾಡಿ, ಪ್ರವಾಸದ ಪ್ಲಾನ್ ಮಾಡಿದ್ದವರೂ ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ. ಮೇಕ್ ಮೈ ಟ್ರೀಪ್ ನಲ್ಲಿ ಶೇ.60ರಷ್ಟು ಪ್ರವಾಸಿಗರು ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಎರಡೂ ದೇಶಗಳ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಂತಾಗಿದೆ.