ಬೆಂಗಳೂರು: ಮೊದಲೆಲ್ಲ ರೈಲ್ವೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿ, ಅದು ಕನ್ಫರ್ಮ್ ಆಗದೆ, ವೇಟಿಂಗ್ ಲಿಸ್ಟ್ ನಲ್ಲಿ ಇದ್ದರೂ ರೈಲುಗಳಲ್ಲಿ ಪ್ರಯಾಣಿಸಬಹುದಿತ್ತು. ಆದರೆ, ಇತ್ತೀಚೆಗೆ ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ಟಿಕೆಟ್ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದೆ. ರೈಲು ಟಿಕೆಟ್ ಕನ್ಫರ್ಮ್ ಆಗದ ಹೊರತು ಪ್ರಯಾಣಿಕರು ರೈಲು ಹತ್ತುವಂತಿಲ್ಲ. ಸ್ಲೀಪರ್ ಸೇರಿ ಯಾವುದೇ ಬೋಗಿ ಇರಲಿ, ವೇಟಿಂಗ್ ಲಿಸ್ಟ್ ನಲ್ಲಿ ಇರುವ ಪ್ರಯಾಣಿಕರು ಬೋಗಿಗಳನ್ನು ಹತ್ತುವಂತಿಲ್ಲ ಎಂಬ ನಿಯಮ ಜಾರಿಗೊಳಿಸಿದೆ.
ಹಾಗೆಯೇ, ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ವೇಟಿಂಗ್ ಲಿಸ್ಟ್ (Waiting List) ಟಿಕೆಟ್ ಹೊಂದಿರುವ ಪ್ರಯಾಣಿಕರು ಸ್ಲೀಪರ್ ಅಥವಾ ಎಸಿ (AC) ಕೋಚ್ ಗಳಲ್ಲಿ ಪ್ರಯಾಣಿಸಲು ಅನುಮತಿ ಇಲ್ಲ. ಇಂತಹ ಪ್ರಯಾಣಿಕರು ಕೇವಲ ಜನರಲ್ ಕೋಚ್ ಗಳಲ್ಲಿ ಮಾತ್ರ ಪ್ರಯಾಣಿಸಬಹುದು. ಇಲ್ಲದಿದ್ದರೆ ಭಾರಿ ದಂಡ ವಿಧಿಸಲಾಗುತ್ತದೆ.
ಸ್ಲೀಪರ್ ಕೋಚ್ ನಲ್ಲಿ ವೇಟಿಂಗ್ ಟಿಕೆಟ್‌ನೊಂದಿಗೆ ಪ್ರಯಾಣಿಸಿದರೆ ಪ್ರಯಾಣಿಕರಿಗೆ 250 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ, ಎಸಿ ಕೋಚ್‌ನಲ್ಲಿ ವೇಟಿಂಗ್ ಟಿಕೆಟ್ ನೊಂದಿಗೆ ಪ್ರಯಾಣಿಸಿದರೆ: 440 ರೂಪಾಯಿವರೆಗೆ ದಂಡ ವಿಧಿಸಲಾಗುತ್ತಿದೆ. ಜನರಲ್ ಟಿಕೆಟ್ ಪಡೆದು, ಸ್ಲೀಪರ್, ಎಸಿ ಬೋಗಿಗಳಲ್ಲಿ ಪ್ರಯಾಣಿಸುವವರಿಗೂ ಟಿಟಿಇಗಳು ದಂಡ ವಿಧಿಸುತ್ತಾರೆ.
ಇದರ ಜತೆಗೆ, ಪ್ರಯಾಣಿಕರಿಂದ ಹತ್ತಿದ ನಿಲ್ದಾಣದಿಂದ ಮುಂದಿನ ನಿಲ್ದಾಣದವರೆಗಿನ ಹೆಚ್ಚುವರಿ ಪ್ರಯಾಣ ದರವನ್ನೂ ವಸೂಲಿ ಮಾಡಬಹುದು. ನಿಯಮ ಉಲ್ಲಂಘಿಸಿದವರನ್ನು ಮುಂದಿನ ನಿಲ್ದಾಣದಲ್ಲಿ ಕೋಚ್ ನಿಂದ ಇಳಿಸುವ ಅಧಿಕಾರವೂ ಟಿಟಿಇಗಳಿಗೆ ಇದೆ. ಅಲ್ಲದೆ, ಒಂದು ರೈಲು ನಿಲ್ದಾಣದಿಂದ ಹತ್ತುವುದಾಗಿ (ಬೋರ್ಡಿಂಗ್) ಉಲ್ಲೇಖಿಸಿ, ಮತ್ತೊಂದು ರೈಲು ನಿಲ್ದಾಣದಿಂದ ರೈಲು ಹತ್ತುವುದನ್ನು ಕೂಡ ರೈಲ್ವೆ ಇಲಾಖೆಯು ರದ್ದುಗೊಳಿಸಿದೆ.



















