ಲಂಡನ್: ಇಂಗ್ಲೆಂಡ್‌ನ ಉತ್ತರ ಭಾಗದಲ್ಲಿರುವ ವಾಲ್ಸಾಲ್‌ನಲ್ಲಿ ಭಾರತೀಯ ಮೂಲದ ಯುವತಿಯೊಬ್ಬರ ಮೇಲೆ ಜನಾಂಗೀಯ ದ್ವೇಷದಿಂದ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ಈ ಸಂಬಂಧ ಶ್ವೇತವರ್ಣೀಯ ಶಂಕಿತ ಆರೋಪಿಯನ್ನು ಪತ್ತೆಹಚ್ಚಲು ಬ್ರಿಟನ್ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ.
ಶನಿವಾರ ಸಂಜೆ ವಾಲ್ಸಾಲ್‌ನ ಪಾರ್ಕ್ ಹಾಲ್ ಪ್ರದೇಶದಲ್ಲಿ 20ರ ಹರೆಯದ ಯುವತಿಯೊಬ್ಬರು ಸಂಕಷ್ಟದಲ್ಲಿರುವುದನ್ನು ಕಂಡು, ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಶಂಕಿತನ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಇದೊಂದು ‘ಜನಾಂಗೀಯ ದ್ವೇಷದ ದಾಳಿ’ ಎಂದು ಪರಿಗಣಿಸಿ ತನಿಖೆ ನಡೆಸುತ್ತಿರುವುದಾಗಿ ಖಚಿತಪಡಿಸಿದ್ದಾರೆ.
ತನಿಖೆಯ ನೇತೃತ್ವ ವಹಿಸಿರುವ ಡಿಟೆಕ್ಟಿವ್ ಸೂಪರಿಂಟೆಂಡೆಂಟ್ ರೋನನ್ ಟೈರರ್, “ಇದು ಯುವತಿಯ ಮೇಲಿನ ಅತ್ಯಂತ ಘೋರ ದಾಳಿ. ಆರೋಪಿಯನ್ನು ಬಂಧಿಸಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಆರೋಪಿಯ ವಿವರಗಳನ್ನು ಕಲೆಹಾಕಲು ಅಧಿಕಾರಿಗಳ ತಂಡಗಳು ಶ್ರಮಿಸುತ್ತಿವೆ” ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು, ಡ್ಯಾಶ್‌ಕ್ಯಾಮ್ ದೃಶ್ಯಾವಳಿ ಅಥವಾ ಸಿಸಿಟಿವಿ ದೃಶ್ಯಗಳು ಲಭ್ಯವಿದ್ದರೆ, ತಕ್ಷಣ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದಾಳಿಕೋರನು 30ರ ಹರೆಯದ ಶ್ವೇತವರ್ಣೀಯನಾಗಿದ್ದು, ದಾಳಿಯ ಸಮಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಭಾರತೀಯ ಸಮುದಾಯದಲ್ಲಿ ಆತಂಕ
ಪೊಲೀಸರು ಹೆಚ್ಚಿನ ವಿವರಗಳನ್ನು ಇನ್ನೂ ಖಚಿತಪಡಿಸದಿದ್ದರೂ, ಸಂತ್ರಸ್ತೆಯು ಪಂಜಾಬಿ ಮೂಲದ ಯುವತಿ ಎಂದು ಸ್ಥಳೀಯ ಸಮುದಾಯ ಗುಂಪುಗಳು ಹೇಳಿವೆ. ಕೆಲವು ವಾರಗಳ ಹಿಂದೆ ಸಮೀಪದ ಓಲ್ಡ್‌ಬರಿ ಪ್ರದೇಶದಲ್ಲಿ ಬ್ರಿಟಿಷ್ ಸಿಖ್ ಮಹಿಳೆಯ ಮೇಲೆ ನಡೆದಿದ್ದ ಜನಾಂಗೀಯ ದ್ವೇಷದ ಅತ್ಯಾಚಾರದ ನಂತರ ಈ ಘಟನೆ ನಡೆದಿರುವುದು ಸಮುದಾಯದಲ್ಲಿ ಆತಂಕ ಮೂಡಿಸಿದೆ.
ಸಿಖ್ ಫೆಡರೇಶನ್ ಯುಕೆ ಸಂಘಟನೆಯು, “ವಾಲ್ಸಾಲ್‌ನಲ್ಲಿ ಜನಾಂಗೀಯ ದ್ವೇಷದ ಅತ್ಯಾಚಾರಕ್ಕೆ ಒಳಗಾದ ಯುವತಿ ಪಂಜಾಬಿ ಮಹಿಳೆ” ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ತಿಳಿಸಿದೆ. “ದಾಳಿಕೋರನು ಆಕೆ ವಾಸವಿದ್ದ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದಾನೆ” ಎಂದು ಸಂಘಟನೆ ಹೇಳಿದೆ.
ಇದನ್ನೂ ಓದಿ: ಪಾಕ್ ಜನರಲ್‌ಗೆ ವಿವಾದಿತ ನಕ್ಷೆ ನೀಡಿದ ಬಾಂಗ್ಲಾದ ಯೂನುಸ್: ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದ ಭಾಗವೆಂದು ಬಿಂಬಿಸಿದ ನಕ್ಷೆ



















