ವಾಷಿಂಗ್ಟನ್, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ಆಡಳಿತದಲ್ಲಿನ ಪ್ರಮುಖ ಹುದ್ದೆಗಳು ಭಾರತೀಯರ ಪಾಲಾಗುತ್ತಿವೆ. ಅದೇ ಮಾದರಿಯಲ್ಲಿ ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್ (FBI) ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ನೇಮಕಗೊಂಡಿದ್ದಾರೆ. ಟ್ರಂಪ್ ಅವರು ಅಧ್ಯಕ್ಷರಾಗುತ್ತಿದ್ದಂತೆಯೇ ಕಾಶ್ ಅವರ ನೇಮಕ ಖಚಿತವಾಗಿತ್ತು, ಆದರೆ ಇದೀಗ ಅಧಿಕೃತ ಆದೇಶ ಹೊರಬಿದ್ದಿದೆ.
ಕಾಶ್ ಪಟೇಲ್ ಅವರು ಮೊದಲಿನಿಂದಲೂ ಟ್ರಂಪ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಈಗ ಅಮೆರಿಕ ಸೆನೆಟ್‌ನಲ್ಲಿ ಅವರ ನಾಮನಿರ್ದೇಶನ ಪರ 51 ಮತಗಳು ಬಿದ್ದಿದ್ದು, 49 ವಿರೋಧ ಮತಗಳು ದಾಖಲಾಗಿವೆ. ಈ ಮೂಲಕ ಅವರು ಎಫ್‌ಬಿಐನ 9ನೇ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ನೇಮಕಾತಿಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಈ ಮೂಲಕ ಕಾಶ್ ಪಟೇಲ್ ಅಮೆರಿಕದ ಪ್ರತಿಷ್ಠಿತ ಎಫ್‌ಬಿಐನ ಮೊದಲ ಭಾರತೀಯ ಮೂಲದ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟ್ರಂಪ್ ಅವರ ಮೊದಲ ಆಡಳಿತ ಅವಧಿಯಲ್ಲಿ, ಪಟೇಲ್ ರಕ್ಷಣಾ ಇಲಾಖೆಯಲ್ಲಿ ಮುಖ್ಯಸ್ಥರಾಗಿ ಹಾಗೂ ರಾಷ್ಟ್ರೀಯ ಗುಪ್ತಚರ ಇಲಾಖೆಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಾಗ, ಟ್ರಂಪ್ ಅವರ ಹಲವಾರು ಪ್ರಮುಖ ಆದ್ಯತೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಅವರು ಹೊತ್ತಿದ್ದರು ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ. 2017ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿಯ ಭಯೋತ್ಪಾದನಾ ನಿಗ್ರಹ ವಿಭಾಗದಲ್ಲಿ ಹಿರಿಯ ವಕೀಲರಾಗಿ ಅವರು ನೇಮಕಗೊಂಡಿದ್ದರು. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಕುರಿತು ನಡೆದ ರಿಪಬ್ಲಿಕನ್ ನೇತೃತ್ವದ ತನಿಖೆಯಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು.
1980ರ ಫೆಬ್ರವರಿ 25ರಂದು, ನ್ಯೂಯಾರ್ಕ್‌ನಲ್ಲಿ, ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತ್ ನ ವಡೋದರ ಮೂಲದ ದಂಪತಿಯ ಮಗನಾಗಿ ಕಾಶ್ಯಪ್ ಪಟೇಲ್ (ಕಾಶ್ ಪಟೇಲ್) ಜನಿಸಿದರು. ರಿಚ್ಮಂಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ವ ಅಧ್ಯಯನ ಮುಗಿಸಿದ ಅವರು, ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌ನಲ್ಲಿ ಕಾನೂನು ಪದವಿ ಪಡೆದರು. ಅನೇಕ ಉನ್ನತ ಕಾನೂನು ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು, ಸುಮಾರು ಒಂಬತ್ತು ವರ್ಷಗಳ ಕಾಲ ಮಿಯಾಮಿ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ.
ಎಫ್‌ಬಿಐ (FBI) ಅಮೆರಿಕದ ಪ್ರಮುಖ ರಾಷ್ಟ್ರೀಯ ಭದ್ರತಾ ಸಂಸ್ಥೆಯಾಗಿದ್ದು, ಅದು ಗುಪ್ತಚರ ಮತ್ತು ಕಾನೂನು ಜಾರಿ ಜವಾಬ್ದಾರಿಗಳನ್ನು ಹೊಂದಿದೆ. ಇದು ಅಮೆರಿಕ ನ್ಯಾಯ ಇಲಾಖೆಯ ಪ್ರಮುಖ ತನಿಖಾ ವಿಭಾಗವಾಗಿದ್ದು, ನಿರ್ದಿಷ್ಟ ಅಪರಾಧಗಳನ್ನು ತನಿಖೆ ಮಾಡುವ ಜೊತೆಗೆ ಇತರ ಕಾನೂನು ಜಾರಿ ಸಂಸ್ಥೆಗಳಿಗೆ ಫಿಂಗರ್‌ಪ್ರಿಂಟ್ ಗುರುತಿಸುವಿಕೆ, ಪ್ರಯೋಗಾಲಯ ಪರೀಕ್ಷೆಗಳು ಮತ್ತು ತರಬೇತಿಯಂತಹ ಸೇವೆಗಳನ್ನು ಒದಗಿಸುವ ಅಧಿಕಾರವನ್ನು ಹೊಂದಿದೆ. ಕ್ರಿಸ್ಟೋಫರ್ ವ್ರೇ ಅವರ ಉತ್ತರಾಧಿಕಾರಿಯಾಗಿ ಕಾಶ್ ಪಟೇಲ್ ಎಫ್‌ಬಿಐ ನಿರ್ದೇಶಕರ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.