ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್‌ನಲ್ಲಿರುವ ಮೋಟೆಲ್ ಒಂದರಲ್ಲಿ, ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ಅವರ ಸಹೋದ್ಯೋಗಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಚಂದ್ರ ನಾಗಮಲ್ಲಯ್ಯ (50) ಎಂಬವರೇ ಮೃತ ವ್ಯಕ್ತಿ. ಅವರನ್ನು ಪತ್ನಿ ಮತ್ತು 18 ವರ್ಷದ ಮಗನ ಎದುರೇ ಕತ್ತಿಯಿಂದ ಕಡಿದು ಶಿರಚ್ಛೇದ ಮಾಡಲಾಗಿದೆ.
ಡಲ್ಲಾಸ್‌ನ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರ ನಾಗಮಲ್ಲಯ್ಯ ಅವರ ಮೇಲೆ, ಅದೇ ಮೋಟೆಲ್‌ನ ಉದ್ಯೋಗಿ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್ (37) ಎಂಬಾತ ಈ ಕೃತ್ಯ ಎಸಗಿದ್ದಾನೆ. ಕೆಟ್ಟುಹೋಗಿದ್ದ ವಾಷಿಂಗ್ ಮಷಿನ್ ಬಳಸದಂತೆ ನಾಗಮಲ್ಲಯ್ಯ ಅವರು ಮಾರ್ಟಿನೆಜ್‌ಗೆ ಸೂಚನೆ ನೀಡಿದ್ದರು. ಈ ಸೂಚನೆ ನೀಡಲು ಅನುವಾದಕ್ಕಾಗಿ ಮತ್ತೊಬ್ಬ ಸಹೋದ್ಯೋಗಿಯ ಸಹಾಯವನ್ನು ಪಡೆದಿದ್ದಕ್ಕೆ ಮಾರ್ಟಿನೆಜ್ ಕೋಪಗೊಂಡಿದ್ದನು. “ನನ್ನೊಂದಿಗೆ ನೇರವಾಗಿ ಮಾತನಾಡದೆ, ಇನ್ನೊಬ್ಬರ ಮೂಲಕ ಅನುವಾದ ಮಾಡಿಸಿದ್ದೇಕೆ” ಎಂದು ಜಗಳ ತೆಗೆದ ಆರೋಪಿ, ಏಕಾಏಕಿ ಕತ್ತಿಯಿಂದ ನಾಗಮಲ್ಲಯ್ಯ ಅವರ ಮೇಲೆ ದಾಳಿ ಮಾಡಿದ್ದಾನೆ.
ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ
ಮೋಟೆಲ್‌ನ ಕಾರಿಡಾರ್‌ನಲ್ಲಿ ನಾಗಮಲ್ಲಯ್ಯ ಅವರನ್ನು ಮಾರ್ಟಿನೆಜ್ ಕತ್ತಿ ಹಿಡಿದು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಗಮಲ್ಲಯ್ಯ ಅವರ ಚೀರಾಟ ಕೇಳಿ ಅವರ ಪತ್ನಿ ಮತ್ತು ಮಗ ಸಹಾಯಕ್ಕೆ ಧಾವಿಸಿದ್ದಾರೆ. ಅವರು ಹಲವು ಬಾರಿ ತಡೆಯಲು ಯತ್ನಿಸಿದರೂ, ಆರೋಪಿ ಅವರನ್ನು ಪಕ್ಕಕ್ಕೆ ತಳ್ಳಿ ಹಲ್ಲೆ ಮುಂದುವರಿಸಿದ್ದಾನೆ. ಅಷ್ಟರಲ್ಲಿ ನಾಗಮಲ್ಲಯ್ಯ ಅವರ ಮಗ ಬೇಸ್‌ಬಾಲ್ ಬ್ಯಾಟ್ ತಂದರೂ, ಅಷ್ಟು ಹೊತ್ತಿಗಾಗಲೇ ನಾಗಮಲ್ಲಯ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದರು.

ನಂತರವೂ ದಾಳಿ ಮುಂದುವರಿಸಿದ ಆರೋಪಿ, ನಾಗಮಲ್ಲಯ್ಯ ಅವರ ಶಿರಚ್ಛೇದ ಮಾಡಿದ್ದಾನೆ. ಬಳಿಕ ಅವರ ಜೇಬಿನಿಂದ ವಸ್ತುಗಳನ್ನು ತೆಗೆದು, ತುಂಡರಿಸಿದ ತಲೆಯನ್ನು ಪಾರ್ಕಿಂಗ್ ಸ್ಥಳಕ್ಕೆ ಒದ್ದು, ನಂತರ ಕಸದ ತೊಟ್ಟಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಂಧನ
ಅಪರಾಧ ಹಿನ್ನೆಲೆ ಹೊಂದಿರುವ ಕ್ಯೂಬಾ ಮೂಲದ ವಲಸಿಗ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಈ ಹಿಂದೆ ವಾಹನ ಕಳ್ಳತನ ಮತ್ತು ಹಲ್ಲೆಯಂತಹ ಪ್ರಕರಣಗಳು ದಾಖಲಾಗಿದ್ದವು. ಇದೀಗ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಜಾಮೀನುರಹಿತ ಬಂಧನದಲ್ಲಿ ಇರಿಸಲಾಗಿದೆ. ಅಪರಾಧ ಸಾಬೀತಾದರೆ, ಆರೋಪಿಗೆ ಪೆರೋಲ್ ಇಲ್ಲದ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವ ಸಾಧ್ಯತೆಯಿದೆ.
ಭಾರತೀಯ ದೂತಾವಾಸದಿಂದ ಸಂತಾಪ
ಹೂಸ್ಟನ್‌ನಲ್ಲಿರುವ ಭಾರತೀಯ ದೂತಾವಾಸವು ನಾಗಮಲ್ಲಯ್ಯ ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. “ನಾವು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ. ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ,” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.



















