ವಾಷಿಂಗ್ಟನ್: ಅಮೆರಿಕದಲ್ಲಿ ಹಮಾಸ್ ಉಗ್ರರ ಪರವಾಗಿ ನಿಲುವು ಹೊಂದಿರುವ ಹಿನ್ನೆಲೆಯಲ್ಲಿ ಭಾರತದ ವಿದ್ಯಾರ್ಥಿ (Indian Student) ಬದರ್ ಖಾನ್ ಸೂರಿ (Badar Khan Suri) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಬದರ್ ಖಾನ್ ಸೂರಿ ಅವರನ್ನು ವಶಕ್ಕೆ ಪಡೆದಿರುವ ಅಮೆರಿಕ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಶೀಘ್ರವೇ ಭಾರತಕ್ಕೆ ಗಡೀಪಾರು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ವಾಷಿಂಗ್ಟನ್ ಡಿಸಿಯಲ್ಲಿರುವ ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಬದರ್ ಖಾನ್ ಸೂರಿ ಅವರು ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ಜತೆ ಒಪ್ಪಂದ ಮಾಡಿಕೊಂಡಿದ್ದು, ಯಹೂದಿ ವಿರೋಧಿ ನಿಲುವುಗಳನ್ನು ಪಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪಾಡ್ ಕಾಸ್ಟ್ ಮೂಲಕ ಹಮಾಸ್ ಉಗ್ರರ ಪರ ನಿಲುವು ವ್ಯಕ್ತಪಡಿಸುವ ಜತೆಗೆ ಯಹೂದಿ ವಿರುದ್ಧ ನೀತಿ ಅನುಸರಿಸುತ್ತಿರುವ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬದರ್ ಖಾನ್ ಸೂರಿ ಅವರು ಅಮೆರಿಕದ ಮಹಿಳೆಯನ್ನು ಮದುವೆಯಾಗಿದ್ದು, ಶೀಘ್ರದಲ್ಲೇ ಇವರನ್ನು ವಲಸೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ವರ್ಜಿನಿಯಾದಲ್ಲಿರುವ ಅವರ ನಿವಾಸದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವೀಸಾ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಬಿಡುಗಡೆ ಮಾಡಬೇಕು ಎಂದು ಬದರ್ ಖಾನ್ ಸೂರಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಲಸೆ ನೀತಿಗಳಲ್ಲಿ ಭಾರಿ ಬದಲಾವಣೆ ತಂದಿದ್ದಾರೆ. ಅಲ್ಲದೆ, ವಲಸಿಗರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ, ವಲಸಿಗರ ವೀಸಾಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದೂ ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಭಾರತದ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಎಂಬುವರು ಹಮಾಸ್ ಪರವಾಗಿ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರ ವೀಸಾ ರದ್ದುಗೊಳಿಸಲಾಗಿತ್ತು. ಬಂಧನದ ಭೀತಿಯಲ್ಲಿದ್ದ ರಂಜನಿ, ಸ್ವಯಂ ಗಡೀಪಾರು ಆಗಿ ಭಾರತಕ್ಕೆ ಮರಳಿದ್ದರು.