ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಮುಗಿಯುವ ಹಂತಕ್ಕೆ ಬಂದು ನಿಂತಿದ್ದು, ಭಾರತೀಯ ಆಟಗಾರರ ಪದಕ ಬೇಟೆ ಮುಂದುವರೆದಿದೆ. ಈ ಬಾರಿ ನಿರೀಕ್ಷೆಯನ್ನೂ ಮೀರಿ ಭಾರತೀಯ ಉಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಬರೋಬ್ಬರಿ 56 ವರ್ಷಗಳ ನಂತರ ಐತಿಹಾಸಿಕ ಸಾಧನೆಯನ್ನು ಭಾರತ ಮಾಡಿದೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಇಲ್ಲಿಯವರೆಗೆ ಭಾರತ 26 ಪದಕಗಳನ್ನು ಗೆದ್ದಿದೆ. ಇದರಲ್ಲಿ 6 ಚಿನ್ನ, 9 ಬೆಳ್ಳಿ ಮತ್ತು 11 ಕಂಚಿನ ಪದಕಗಳು ಇವೆ. ಶುಕ್ರವಾರ ನಡೆದ ಪುರುಷರ ಹೈಜಂಪ್ T54 ಈವೆಂಟ್ ನಲ್ಲಿ ಪ್ರವೀಣ್ ಕುಮಾರ್ ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ಚಿನ್ನದ ಪದಕಗಳ ಸಂಖ್ಯೆಯನ್ನು 6ಕ್ಕೆ ಏರಿಸಿದರು. ಇಷ್ಟೊಂದು ಪ್ರಮಾಣದಲ್ಲಿ ಭಾರತೀಯರು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು. ಅಲ್ಲದೇ, 26 ಪದಕ ಗೆದ್ದಿದ್ದು ಕೂಡ ಇದೇ ಮೊದಲು.
ಹಿಂದಿನ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಐದು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿತ್ತು. ಆ ವೇಳೆ ಭಾರತ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಈ ಬಾರಿ ಹಲವಾರು ಆಟಗಾರರು ಪದಕ ಗೆಲ್ಲುವ ಹೊಸ್ತಿಲವರೆಗೂ ಬಂದು ಕೈ ಚೆಲ್ಲಿದ್ದು ಕೂಡ ಉತ್ತಮ ಸಾಧನೆಗಳಲ್ಲಿ ಒಂದಾಗಿದೆ.
ಈ ಬಾರಿ ಶೂಟರ್ ಅವನಿ ಲೆಖರಾ ಪದಕ ಬೇಟೆ ಆರಂಭಿಸಿದರು. ಭಾರತ ಲೆಖರಾ ಅವರ ಚಿನ್ನದ ಮೂಲಕ ತನ್ನ ಪದಕ ಬೇಟೆ ಆರಂಭಿಸಿತು. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅವನಿ ಚಿನ್ನದ ಪದಕ ಗೆದ್ದರೆ, ಇದೇ ಸ್ಪರ್ಧೆಯಲ್ಲಿ ಭಾರತದ ಮೋನಾ ಅಗರ್ವಾಲ್ ಕಂಚು ಗೆದ್ದರು. ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್‌ಎಲ್ 3 ಸ್ಪರ್ಧೆಯಲ್ಲಿ ನಿತೇಶ್ ಕುಮಾರ್ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದು ಕೊಟ್ಟರು.
ಸುಮಿತ್ ಅಂತಿಲ್ ಭಾರತಕ್ಕೆ ಮೂರನೇ ಚಿನ್ನದ ಪದಕವನ್ನು ಜಾವೆಲಿನ್ ಎಸೆತದಲ್ಲಿ ತಂದು ಕೊಟ್ಟರು. ಸುಮಿತ್ 70.59 ಮೀಟರ್ ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದ್ದಲ್ಲದೆ ಚಿನ್ನದ ಪದಕ ಗೆದ್ದರು. ಹರ್ವಿಂದರ್ ಸಿಂಗ್ ಆರ್ಚರಿ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಚಿನ್ನ ಗೆದ್ದು ಕೊಟ್ಟರು. ಈ ಮೂಲಕ ಹರ್ವಿಂದರ್ ನಾಲ್ಕನೇ ಚಿನ್ನದ ಪದಕ ಕೆದ್ದರು. ಹರ್ವಿಂದರ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದಿದ್ದರು. ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ 34.92 ಮೀಟರ್ ದೂರ ಎಸೆದು ಏಷ್ಯನ್ ದಾಖಲೆ ನಿರ್ಮಿಸಿ ಧರಂಬೀರ್ ನೈನ್ ಚಿನ್ನ ಗೆದ್ದರು. ಎತ್ತರ ಜಿಗಿತದಲ್ಲಿ ಪ್ರವೀಣ್ ಕುಮಾರ್ ಚಿನ್ನ ಗೆಲ್ಲುವದರ ಮೂಲಕ 6ನೇ ಚಿನ್ನ ಗೆದ್ದು ಕೊಟ್ಟಿದ್ದಾರೆ.