ನ್ಯೂಯಾರ್ಕ್: ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಬಾರತವು ಮತ್ತೊಮ್ಮೆ ಪಾಕ್ ನ್ನು ತರಾಟೆಗೆ ತೆಗೆದುಕೊಂಡಿದೆ.
ಭಯೋತ್ಪಾದನೆ ವಿಷಯದಲ್ಲಿ ಜಾಗತಿಕ ಖ್ಯಾತಿ ಹೊಂದಿರುವ ಪಾಕ್ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಮೇಲೆ ‘ದಾಳಿ ಮಾಡುವ’ ಮತ್ತು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಎತ್ತುವ ‘ಧೈರ್ಯ’ ಮಾಡುತ್ತಿರುವುದು ಅಪಹಾಸ್ಯ ಎಂದು ಭಾರತ ಗುಡುಗಿದೆ.
ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಶುಕ್ರವಾರ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಎತ್ತಿದ್ದರು. ಕಾಶ್ಮೀರ ಭಾರತಕ್ಕೆ ಸವಾಲು ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಖಡಕ್ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಪಾಕ್ ಗೆ ತಕ್ಕಶಾಸ್ತಿ ಮಾಡಿದ್ದಾರೆ. ಪಾಕ್ ಇಂತಹ ಬೂಟಾಟಿಕೆ ನಿಲ್ಲಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳನ್ನು ಅಡ್ಡಿಪಡಿಸಲು ನಿರಂತರವಾಗಿ ಭಯೋತ್ಪಾದನೆ ಬಳಸುತ್ತಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಆದರೆ, ಈ ವಿಷಯದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನ್ ಭಯೋತ್ಪಾದನೆಯನ್ನೇ ಉಸಿರಾಗಿಸಿಕೊಂಡಿದೆ. ನಮ್ಮ ಆರ್ಥಿಕ ರಾಜಧಾನಿ ಮುಂಬೈ, ಮಾರುಕಟ್ಟೆ ಸ್ಥಳಗಳು ಮತ್ತು ತೀರ್ಥಯಾತ್ರೆಯ ಮಾರ್ಗಗಳ ಮೇಲೆ ದಾಳಿ ಮಾಡಿದೆ. ಇಂತಹ ದೇಶವು ಎಲ್ಲಿಯಾದರೂ ಹಿಂಸಾಚಾರದ ಬಗ್ಗೆ ಮಾತನಾಡುವುದು ಬೂಟಾಟಿಕೆ. ನಾವು ಭಯೋತ್ಪಾದನೆಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ.