ನವದೆಹಲಿ: ಥಾಯ್ಲೆಂಡ್ ಪ್ರವಾಸ ಮುಗಿಸಿ ಮೂರು ದಿನಗಳ ಶ್ರೀಲಂಕಾ ಪ್ರವಾಸ(Modi visit to SriLanka) ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದ್ಧೂರಿ ಸ್ವಾಗತ ದೊರೆತಿದ್ದು, ಶನಿವಾರ ಶ್ರೀಲಂಕಾದಲ್ಲಿ ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಲಾಯಿತು. ಭೇಟಿಯ ಮೊದಲ ದಿನವೇ ಭಾರತ ಮತ್ತು ಶ್ರೀಲಂಕಾ ರಕ್ಷಣೆ, ಇಂಧನ, ಡಿಜಿಟಲ್ ಮೂಲಸೌಕರ್ಯ, ಆರೋಗ್ಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಒಟ್ಟು 7 ಒಪ್ಪಂದಗಳಿಗೆ ಸಹಿ ಹಾಕಿದವು. ಹಿಂದೂ ಮಹಾಸಾಗರ ಪ್ರದೇಶದಾದ್ಯಂತ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಬಗ್ಗೆ ಕಳವಳ ಹೆಚ್ಚಾಗಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಕಳೆದ ವರ್ಷ ಶ್ರೀಲಂಕಾದ ಅಧ್ಯಕ್ಷರಾಗಿ ಅನುರಾ ಕುಮಾರ ದಿಸ್ಸಾನಾಯಕೆ ಅವರು ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿಯವರ ಮೊದಲ ಶ್ರೀಲಂಕಾ ಭೇಟಿ ಇದಾಗಿದೆ. ಅಲ್ಲದೇ 2024ರಲ್ಲಿ ದಿಸ್ಸಾನಾಯಕೆ ಅವರ ಅಧಿಕಾರಾವಧಿ ಪ್ರಾರಂಭವಾದ ಬಳಿಕ ವಿದೇಶಿ ನಾಯಕರೊಬ್ಬರ ಮೊದಲ ಭೇಟಿಯೂ ಇದಾಗಿದೆ. ಅಧಿಕಾರ ವಹಿಸಿಕೊಂಡ ಬಳಿಕ ದಿಸ್ಸಾನಾಯಕೆ ಅವರು ಕಳೆದ ಡಿಸೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಇದು ಅವರ ಮೊದಲ ಅಧಿಕೃತ ವಿದೇಶ ಭೇಟಿಯಾಗಿತ್ತು.
ಈಗ 3 ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಲಂಕೆಗೆ ತೆರಳಿದ್ದು, 2022ರ ಆರ್ಥಿಕ ಬಿಕ್ಕಟ್ಟಿನ ನಂತರ ಶ್ರೀಲಂಕಾವನ್ನು ಪುನರ್ನಿರ್ಮಿಸಲು ಸಹಾಯ ಮಾಡುವ ಭಾರತದ ಉಪಕ್ರಮವನ್ನು ಮುಂದುವರಿಸುವ ಬಗ್ಗೆ ಮೋದಿ ಘೋಷಿಸಲಿದ್ದಾರೆ. ಶ್ರೀಲಂಕಾವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು 4 ಮಿಲಿಯನ್ ಡಾಲರ್ ನೀಡಿದ ನಂತರ, ಸಾಲ ಪುನರ್ರಚನೆ ಮತ್ತು ಕರೆನ್ಸಿ ವಿನಿಮಯ ವ್ಯವಸ್ಥೆಗಳೊಂದಿಗೆ ದ್ವೀಪ ರಾಷ್ಟ್ರಕ್ಕೆ ಸಹಾಯ ಮಾಡುವುದನ್ನು ಮುಂದುವರಿಸುವ ಇಚ್ಛೆಯನ್ನು ಭಾರತ ವ್ಯಕ್ತಪಡಿಸಿದೆ.
ಟ್ರಿಂಕೋಮಲಿಯಲ್ಲಿ 120 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸಂಬಂಧಿಸಿ ಭಾರತದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಮತ್ತು ಶ್ರೀಲಂಕಾದ ಸಿಲೋನ್ ವಿದ್ಯುತ್ ಮಂಡಳಿಯ ನಡುವಿನ ಜಂಟಿ ಒಪ್ಪಂದಕ್ಕೂ ಪ್ರಧಾನಿ ಮೋದಿ ಸಹಿ ಹಾಕಿದರು. ಇದಲ್ಲದೇ ವ್ಯಾಪಾರ, ರಕ್ಷಣೆ ಮತ್ತು ಕಡಲ ಭದ್ರತೆ ಕೂಡ ಉಭಯ ನಾಯಕರ ಕಾರ್ಯಸೂಚಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಶ್ರೀಲಂಕಾದಿಂದ ಕಚ್ಚಥೀವು ದ್ವೀಪವನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ತಮಿಳುನಾಡು ವಿಧಾನಸಭೆ ನಿರ್ಣಯ ಅಂಗೀಕರಿಸಿರುವಂತೆಯೇ ಪ್ರಧಾನಿ ಮೋದಿಯವರ ಈ ಭೇಟಿ ಮಹತ್ವ ಪಡೆದಿದೆ.
ಈ ನಡುವೆ, ಭಾರತ ಮತ್ತು ಶ್ರೀಲಂಕಾ ನಡುವೆ ಶೀಘ್ರದಲ್ಲೇ ಜಾರಿಗೆ ಬರುವ ನಿರೀಕ್ಷೆಯಿರುವ ರಕ್ಷಣಾ ಒಪ್ಪಂದದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದರೆ, ಶ್ರೀಲಂಕಾ ಜೊತೆಗಿನ ಭಾರತದ ರಕ್ಷಣಾ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಬರೆದಂತಾಗಲಿದೆ. ಈ ಒಪ್ಪಂದದೊಂದಿಗೆ, ಜಂಟಿ ಕಡಲ ಕಣ್ಗಾವಲು, ಸೇನಾ ಕವಾಯತು, ಮತ್ತು ಸಲಕರಣೆಗಳ ಬೆಂಬಲದ ವಿಷಯದಲ್ಲಿ ನವದೆಹಲಿ ಮತ್ತು ಕೊಲಂಬೊ ವ್ಯೂಹಾತ್ಮಕವಾಗಿ ಹತ್ತಿರವಾಗಲಿವೆ.
ದಿಸ್ಸಾನಾಯಕೆ-ಮೋದಿ ದ್ವಿಪಕ್ಷೀಯ ಮಾತುಕತೆ ಬಳಿಕ ಒಪ್ಪಂದದ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಲಿದ್ದಾರೆ. ಬಳಿಕ ದಿಸ್ಸಾನಾಯಕೆ ಅವರೊಂದಿಗೆ ಮೋದಿ ಹಲವಾರು ವರ್ಚುವಲ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: Canada: ಕೆನಡಾದ ರಾಕ್‌ಲ್ಯಾಂಡ್‌ನಲ್ಲಿ ಚೂರಿ ಇರಿದು ಭಾರತೀಯನ ಹತ್ಯೆ: ಶಂಕಿತ ಸೆರೆ
ರಾಜಪಕ್ಸೆಯನ್ನು ಪದಚ್ಯುತಗೊಳಿಸಿದ ನಂತರ ಅಧಿಕಾರ ವಹಿಸಿಕೊಂಡ ಶ್ರೀಲಂಕಾದ ಹೊಸ ಎಡಪಂಥೀಯ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ತಮ್ಮ ಭಾರತ ಭೇಟಿಯ ವೇಳೆ, ದ್ವೀಪ ರಾಷ್ಟ್ರಕ್ಕೆ ಅಭಿವೃದ್ಧಿ ನೆರವು ನೀಡುವಲ್ಲಿ “ಸಕಾರಾತ್ಮಕ ಮತ್ತು ಪರಿಣಾಮಕಾರಿ ಪಾತ್ರ”ಕ್ಕಾಗಿ ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದರು. 2022 ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ 2.9 ಶತಕೋಟಿ ಡಾಲರ್ ಐಎಂಎಫ್ ನೆರವು ಪಡೆಯಲು ಭಾರತ ಮಾಡಿದ ಸಹಾಯವನ್ನೂ ದಿಸ್ಸಾನಾಯಕೆ ಉಲ್ಲೇಖಿಸಿದ್ದರು.
ಇಂದು ಸಂಜೆ, ಶ್ರೀಲಂಕಾದ ಗಣ್ಯರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ತಾಜ್ ಸಮುದ್ರ ಹೋಟೆಲ್ ಗೆ ಭೇಟಿ ನೀಡಲಿದ್ದಾರೆ. ಜೊತೆಗೆ ಮಧ್ಯಾಹ್ನ ಭಾರತೀಯ ಶಾಂತಿಪಾಲನಾ ಪಡೆ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಗುಚ್ಛ ಅರ್ಪಿಸಲಿದ್ದಾರೆ. ಸಂಜೆ 7.30 ರ ಸುಮಾರಿಗೆ, ಅಧ್ಯಕ್ಷ ದಿಸ್ಸಾನಾಯಕೆ ಅವರು ಪ್ರಧಾನಿ ಮೋದಿಯವರ ಗೌರವಾರ್ಥ ಔತಣಕೂಟವನ್ನು ಆಯೋಜಿಸಿದ್ದಾರೆ.