ರಾಯ್‌ಪುರ: ಛತ್ತೀಸ್‌ಗಢದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಶುಕ್ರವಾರ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಕೇವಲ ಪಂದ್ಯವನ್ನು ಗೆಲ್ಲುವುದು ಮಾತ್ರವಲ್ಲದೆ, ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಬದ್ಧ ವೈರಿ ಪಾಕಿಸ್ತಾನದ ಹೆಸರಲ್ಲಿದ್ದ ಬೃಹತ್ ವಿಶ್ವ ದಾಖಲೆಯೊಂದನ್ನು ಅಳಿಸಿ ಹಾಕುವ ಮೂಲಕ ಹೊಸ ಇತಿಹಾಸ ಬರೆಯಿತು. ಪ್ರವಾಸಿ ನ್ಯೂಜಿಲೆಂಡ್ ತಂಡ ನೀಡಿದ್ದ 209 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ಇನ್ನು 28 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಅತಿ ವೇಗವಾಗಿ 200 ಪ್ಲಸ್ ಮೊತ್ತವನ್ನು ಬೆನ್ನಟ್ಟಿದ ಜಗತ್ತಿನ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಈ ಮೊದಲು ಪಾಕಿಸ್ತಾನ ತಂಡವು 2025ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧವೇ 205 ರನ್‌ಗಳನ್ನು 24 ಎಸೆತಗಳು ಬಾಕಿ ಇರುವಾಗ ಚೇಸ್ ಮಾಡಿ ದಾಖಲೆ ನಿರ್ಮಿಸಿತ್ತು. ಆದರೆ ರಾಯ್‌ಪುರದಲ್ಲಿ ಅಬ್ಬರಿಸಿದ ಭಾರತೀಯ ಬ್ಯಾಟರ್‌ಗಳು ಕೇವಲ 15.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 209 ರನ್ ಸಿಡಿಸುವ ಮೂಲಕ ಪಾಕಿಸ್ತಾನದ ಆ ದಾಖಲೆಯನ್ನು ಇತಿಹಾಸದ ಪುಟ ಸೇರಿಸಿದರು. ಈ ಭರ್ಜರಿ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ ಸತತ ಎರಡನೇ ಜಯ ದಾಖಲಿಸಿ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಭಾರತದ ಈ ಸ್ಮರಣೀಯ ಗೆಲುವಿನ ಹಿಂದೆ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನವಿದೆ. ಆರಂಭದಲ್ಲಿ ಕೇವಲ 6 ರನ್‌ಗಳಿಗೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಈ ಜೋಡಿ ಆಸರೆಯಾಯಿತು. ಮೂರನೇ ವಿಕೆಟ್‌ಗೆ ಕೇವಲ 48 ಎಸೆತಗಳಲ್ಲಿ 122 ರನ್‌ಗಳ ಸ್ಫೋಟಕ ಜೊತೆಯಾಟವಾಡಿದ ಕಿಶನ್ ಮತ್ತು ಸೂರ್ಯ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು. ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 76 ರನ್ ಚಚ್ಚಿದರು.
ಮತ್ತೊಂದೆಡೆ ‘ಮಿಸ್ಟರ್ 360’ ಖ್ಯಾತಿಯ ಸೂರ್ಯಕುಮಾರ್ ಯಾದವ್ ತಮ್ಮ ಹಳೆಯ ಲಯಕ್ಕೆ ಮರಳುವ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಅಂತಿಮವಾಗಿ 37 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದ ಸೂರ್ಯ, ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಒಳಗೊಂಡಿದ್ದರು. ಇವರಿಗೆ ಉತ್ತಮ ಸಾಥ್ ನೀಡಿದ ಶಿವಂ ದುಬೆ ಕೂಡ ಕೇವಲ 18 ಎಸೆತಗಳಲ್ಲಿ ಅಜೇಯ 36 ರನ್ ಬಾರಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಸೂರ್ಯ ಮತ್ತು ದುಬೆ ನಾಲ್ಕನೇ ವಿಕೆಟ್‌ಗೆ ಅಜೇಯ 81 ರನ್‌ಗಳನ್ನು ಸೇರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ತೋರುತ್ತಿರುವ ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನಗಳಲ್ಲಿ ಇದೂ ಒಂದಾಗಿ ದಾಖಲಾಯಿತು.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಇಶಾನ್ ಕಿಶನ್ ಅಬ್ಬರ | 21 ಎಸೆತಗಳಲ್ಲಿ ಅರ್ಧಶತಕ, ಭಾರತಕ್ಕೆ ದಾಖಲೆಯ ಜಯ



















