ಶ್ರೀಲಂಕಾ ವನಿತೆಯರ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತೀಯ ವನಿತೆಯರು ಗೆಲುವು ಸಾಧಿಸಿದ್ದಾರೆ.
ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಭಾರತ ವನಿತೆಯರ ತಂಡಗಳ ನಡುವೆ ತ್ರಿಕೋನ ಸರಣಿ ನಡೆಯುತ್ತಿದ್ದು, ಭಾರತ ತಂಡ ಜಯದೊಂದಿಗೆ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಭಾರತ ವನಿತಯರ ತಂಡ ಪೈಪೋಟಿ ನಡೆಸಿವೆ.
ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ ತಲಾ 39 ಓವರ್ ಗಳಿಗೆ ಪಂದ್ಯ ಇಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕೊನೆಯ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು.
ತಂಡದ ಪರ ಆರಂಭಿಕ ಆಟಗಾರ್ತಿ ಹಸಿನಿ ಪೆರೇರಾ ಅತ್ಯಧಿಕ 30 ರನ್ ಬಾರಿಸಿದರೆ, ಕವಿಶಾ ದಿಲ್ಹಾರಿ 25 ರನ್ ಹಾಗೂ ವಿಕೆಟ್ ಕೀಪರ್ ಅನುಷ್ಕಾ ಸಂಜೀವಿನಿ 22 ರನ್ ಗಳಿಸಿದರು. ಭಾರತದ ಪರ ಸ್ನೇಹ ರಾಣಾ 3 ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ 29.4 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಉಪನಾಯಕಿ ಮಂಧಾನ 46 ಎಸೆತಗಳಲ್ಲಿ 43 ರನ್ ಗಳಿಸಿ ಔಟ್ ಆದರೆ, ಪ್ರತೀಕಾ ಹಾಗೂ ಹರ್ಲೀನ್ ಡಿಯೋಲ್ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದು ಕೊಟ್ಟರು. ಆರಂಭಿಕ ಆಟಗಾರ್ತಿ ಪ್ರತೀಕಾ 62 ಎಸೆತಗಳಲ್ಲಿ 50, ಹರ್ಲೀನ್ 71 ಎಸೆತಗಳಲ್ಲಿ 48 ರನ್ ರನ್ ಗಳಿಸಿದರು. ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಏ. 29ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.