ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ 227 ರನ್ ಗಳ ಮುನ್ನಡೆ ಪಡೆದಿರುವ ಭಾರತ ತಂಡ ಬಾಂಗ್ಲಾದೇಶಕ್ಕೆ ದೊಡ್ಡ ಟಾರ್ಗೆಟ್ ನೀಡುವ ಉತ್ಸುಕದಲ್ಲಿದೆ.
2ನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡಿರುವ ಭಾರತ ತಂಡ 81 ರನ್ ಗಳಿಸಿದೆ. ಇದರೊಂದಿಗೆ ತಂಡದ ಮುನ್ನಡೆ 308 ರನ್ ಗಳಿಗೇರಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶವನ್ನು 149 ರನ್ ಗಳಿಗೆ ಆಲೌಟ್ ಮಾಡಿ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಎರಡನೇ ಇನ್ನಿಂಗ್ಸ್ ನಲ್ಲಿಯೂ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಒಂದಂಕಿಗೆ ಔಟ್ ಆದರು.
ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ 10 ರನ್ ಗಳಿಸಿ ಔಟ್ ಆಗಿದ್ದಾರೆ. ಮತ್ತೊಮ್ಮೆ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ 17 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಔಟಿಲ್ಲದಿದ್ದರೂ, ತಾನು ಮಾಡಿಕೊಂಡ ಎಡವಟ್ಟಿನಿಂದಾಗಿ ಕೊಹ್ಲಿ ವಿಕೆಟ್ ಒಪ್ಪಿಸಿದರು. ಸದ್ಯ ರಿಷಬ್ ಪಂತ್ ಹಾಗೂ ಶುಭಮನ್ ಗಿಲ್ ಕ್ರೀಜ್ ನಲ್ಲಿದ್ದಾರೆ. ಈ ಮೂಲಕ ಭಾರತ 308 ರನ್ ಗಳ ಮುನ್ನಡೆ ಸಾಧಿಸಿದೆ.
ಜಸ್ಪ್ರೀತ್ ಬುಮ್ರಾ ಸೇರಿದಂತೆ ಬೌಲರ್ ಗಳ ಮ್ಯಾಜಿಕ್ ಗೆ ಬಾಂಗ್ಲಾ ನಡುಗೆ ಹೋಗಿದೆ. ಹೀಗಾಗಿ ಕೇವಲ 149 ರನ್ ಗಳಿಗೆ ಔಟ್ ಆಗಿದೆ. ಬುಮ್ರಾ 11 ಓವರ್ಗಳಲ್ಲಿ 50 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ.
ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 376 ರನ್ ಗಳಿಸಿತು. ರವಿಚಂದ್ರನ್ ಅಶ್ವಿನ್ 112 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜಾ ಐದನೇ ಟೆಸ್ಟ್ ಶತಕ ವಂಚಿತರಾಗಿ 86 ರನ್ ಗಳಿಸಿದರು.